ರೈತರ ಪ್ರತಿಭಟನೆಗೆ ‘ಮಂಡಿ’ಯೂರಿತಾ ಕೇಂದ್ರ?: ಹೊಸ ಭರವಸೆ ಅಂಶಗಳ ವಿವರ ಹೀಗಿದೆ…

ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕೇಂದ್ರ ಸರ್ಕಾರ ಪ್ರಸ್ತಾವನೆಗಳ ಕರಡನ್ನು ತಯಾರಿಸಿ ಕಳಿಸಿಕೊಟ್ಟಿದೆ. 

ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ರೈತ ಸಮುದಾಯಕ್ಕೆ ಇರುವ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈಗಿರುವ ಕನಿಷ್ಟ ಬೆಂಬಲ ಬೆಲೆ (ಎಂಎಸ್ ಪಿ) ವ್ಯವಸ್ಥೆ ಮುಂದುವರೆಯಲಿದೆ ಎಂದು ಲಿಖಿತ ಭರವಸೆ ನೀಡುವುದು ಸೇರಿದಂತೆ ಕೇಂದ್ರ ಸರ್ಕಾರ ರೈತ ಸಮುದಾಯಕ್ಕೆ ಕೆಲವು ಪ್ರಸ್ತಾವನೆ, ಭರವಸೆಗಳನ್ನು ನೀಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂಂದಿಗೆ ನಡೆದ ಮಾತುಕತೆ ವಿಫಲವಾದ ಬೆನ್ನಲ್ಲೇ ಈ ಪ್ರಸ್ತಾವನೆಯನ್ನು ಕಳಿಸಿಕೊಡಲಾಗಿದ್ದು, ಅಗತ್ಯವಿರುವ 7 ಅಂಶಗಳಿಗೆ ತಿದ್ದುಪಡಿ ತಂದು, ಹೊಸ ಕೃಷಿ ಕಾನೂನಿಂದಾಗಿ ಮಂಡಿ ವ್ಯವಸ್ಥೆ ಕುಸಿಯಲಿದೆ ಎಂಬ ರೈತರ ಆತಂಕವನ್ನು ನಿವಾರಿಸಲು ಸಿದ್ಧವಿರುವುದಾಗಿ ತಿಳಿಸಿದೆ. 

ಆದರೂ ರೈತರು ಕೇಂದ್ರ ಸರ್ಕಾರದ ಭರವಸೆ, ಪ್ರಸ್ತಾವನೆ ಕರಡನ್ನು ನಿರಾಕರಿಸಿದ್ದು, ಕಾನೂನನ್ನು ಸಂಪೂರ್ಣವಾಗಿ ಹಿಂಪಡೆಯಬೇಕೆಂದು ಹೇಳಿದೆ.

ಕೇಂದ್ರ ಸರ್ಕಾರದ ಕರಡು ಪ್ರಸ್ತಾವನೆಗಳು ಹೀಗಿವೆ

  • ಎಂಎಸ್ ಪಿ ವ್ಯವಸ್ಥೆ ಹೀಗೆಯೇ ಮುಂದುವರೆಯಲಿದೆ ಎಂದು ಲಿಖಿತ ಭರವಸೆ ನೀಡುವುದು 
  • ನಿಯಂತ್ರಿತ ಮಂಡಿಗಳ ಹೊರತಾಗಿ ಖಾಸಗಿ ವ್ಯಾಪಾರಸ್ಥರು ಟ್ರೇಡಿಂಗ್ ಗೆ ನೋಂದಣಿ ಮಾಡಲು ರಾಜ್ಯಗಳಿಗೆ ಅವಕಾಶ ನೀಡಲು ಕಾನೂನಿಗೆ ತಿದ್ದುಪಡಿ 
  • ಖಾಸಗಿ ಸಂಸ್ಥೆಗಳು ನೋಂದಣಿ ಮಾಡಿಕೊಂಡಿರುವ ಮಂಡಿಗಳಲ್ಲಿ ಎಪಿಎಂಸಿಗಳಿಗೆ ಅನ್ವಯವಾಗುವಂತೆಯೇ  ಸೆಸ್/ಶುಲ್ಕಗಳನ್ನು ರಾಜ್ಯ ಸರ್ಕಾರ ವಿಧಿಸಲಿದೆ.
  • ವಿವಾದಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಸಿವಿಲ್ ನ್ಯಾಯಾಗಳ ಮೊರೆ ಹೋಗಲು ರೈತರಿಗೆ ಆಯ್ಕೆ ನೀಡುವುದಕ್ಕಾಗಿ ಕಾನೂನು ತಿದ್ದುಪಡಿ
  • ಗುತ್ತಿಗೆ ನೀಡಿರುವ ಕೃಷಿ ಭೂಮಿಯಲ್ಲಿ ನಿರ್ಮಾಣ ಮಾಡಿರುವ ಯಾವುದೇ ಕಟ್ಟಡ ನಿರ್ಮಾಣದ ಮೇಲೆ ಸಾಲ ಸಿಗದಂತೆ ಹಾಗೂ ಗುತ್ತಿಗೆ ಅವಧಿ ಮುಕ್ತಾಯಗೊಂಡ ನಂತರ ಗುತ್ತಿಗೆಗೆ ಪಡೆದಿದ್ದವರು ಆ ಕಟ್ಟಡವನ್ನು ಅತಿಕ್ರಮಣ ಮಾಡದಂತೆ ನೋಡಿಕೊಳ್ಳಲಾಗುವುದು ಎಂದು ರೈತರಿಗೆ ಭರವಸೆ

ಭೋಗ್ಯ, ಅಡಮಾನ ಅಥವಾ ಕೃಷಿ ಭೂಮಿ ಮಾರಾಟಕ್ಕೆ ನಿರ್ಬಂಧ ವಿಧಿಸುವುದು, ಸ್ಪಾನ್ಸರ್ ಗಳು ಕೃಷಿ ಭೂಮಿ ಮೇಲಿನ ಒಡೆತನ ಕಸಿದುಕೊಳ್ಳುವುದಕ್ಕೆ ಅಥವಾ ಭೂಮಿಯ ಸ್ವರೂಪ ಬದಲಾವಣೆ ಮಾಡುವುದಕ್ಕೆ ನಿರ್ಬಂಧ ವಿಧಿಸುವುದೇ ಮೊದಲಾದ ಭರವಸೆಗಳನ್ನು ಕೇಂದ್ರ ಸರ್ಕಾರ ರೈತರಿಗೆ ಕಳಿಸಿಕೊಟ್ಟಿರುವ ತನ್ನ ಪ್ರಸ್ತಾವನೆಗಳ ಅಂಶಗಳಲ್ಲಿ ಸೇರಿಸಿದೆ.

Leave a Reply

Your email address will not be published. Required fields are marked *

error: Content is protected !!