ಭೂಸುಧಾರಣಾ ಕಾಯ್ದೆಗೆ ವಿಧಾನಸಭೆಯಲ್ಲಿ ಧ್ವನಿಮತದ ಅಂಗೀಕಾರ!

ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಮಂಡಿಸಿದ ಈ ವಿಧೇಯಕಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿತು. ಸಭಾತ್ಯಾಗದ ನಡುವೆಯೇ ಸದನದಲ್ಲಿ ವಿಧೇಯಕಕ್ಕೆ ಒಪ್ಪಿಗೆ ದೊರೆಯಿತು.

ವಿಧೇಯಕಕ್ಕೆ ಕೆಲವು ತಿದ್ದುಪಡಿಗಳನ್ನು ಮಂಡಿಸಿದ ಎಚ್.ಕೆ.ಪಾಟೀಲ್ ಕರ್ನಾಟಕದವರಿಗೆ ಮಾತ್ರ ಜಮೀನು ಖರೀದಿಸಲು ಹಾಗೂ ಅನ್ಯ ರಾಜ್ಯದವರು ಜಮೀನು ಖರೀದಿಸಿದರೆ ಅದನ್ನು ರದ್ದುಪಡಿಸುವ ಅಧಿಕಾರ ನೀಡಿ ಎಂದು ತಿದ್ದುಪಡಿ ಮಂಡಿಸಿದರು. ತಿದ್ದುಪಡಿಗಳೊಂದಿಗೆ ವಿಧೇಯಕ ಪರ್ಯಾಲೋಚನೆ ಮಾಡಬೇಕೆಂದು ಒತ್ತಾಯಿಸಿದರು.

ತಿದ್ದುಪಡಿ ಮಂಡನೆಗೆ ವಿರೋಧ ವ್ಯಕ್ತಪಡಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಒಮ್ಮೆ ವಿಧೇಯಕ ಅಂಗೀಕಾರವಾದ ನಂತರ ತಿದ್ದುಪಡಿಗೆ ಅವಕಾಶವಿಲ್ಲ. ವಿಧಾನಪರಿಷತ್‌ನಲ್ಲಿ ಆಗಿರುವ ತಿದ್ದುಪಡಿಗೆ ಸೀಮಿತವಾಗಿದೆ. ಎಚ್.ಕೆ ಪಾಟೀಲ್ ಅವರು ತಂದಿರುವ ತಿದ್ದುಪಡಿಗೆ ಅವಕಾಶವಿಲ್ಲ ಎಂದರು.

ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಸಚಿವ ಆರ್.ಅಶೋಕ್ ಇದಕ್ಕೆ ದನಿಗೂಡಿಸಿ ಮಾತನಾಡಿದರು. ಎಚ್.ಕೆ.ಪಾಟೀಲ್ ಅವರ ಬೆಂಬಲಕ್ಕೆ ನಿಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, ರಾಜ್ಯದ ರೈತರನ್ನು ನಿರ್ಗತಿಕರನ್ನಾಗಿ ಮಾಡುತ್ತಿದ್ದೀರಿ ಎಂದರು. ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ಹೇಳಿದರು.

ಈ ನಡುವೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಎಚ್.ಕೆ.ಪಾಟೀಲ್ ಅವರು ತಂದಿರುವ ತಿದ್ದುಪಡಿ ಪ್ರಸ್ತಾವನೆ ನಿಯಮಗಳಡಿ ಬರುವುದಿಲ್ಲ ಹಾಗಾಗಿ ತಿರಸ್ಕಾರ ಮಾಡಲಾಗಿದೆ ಎಂದು ತೀರ್ಮಾನ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರೊಂದಿಗೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಆಗ ಸಭಾಧ್ಯಕ್ಷರು ವಿಧೇಯಕವನ್ನು ಮತಕ್ಕೆ ಹಾಕಿದಾಗಿ ಧ್ವನಿಮತದ ಅನುಮೋದನೆ ದೊರೆಯಿತು. ಒಂದು ಹಂತದಲ್ಲಿ ಮಾಧುಸ್ವಾಮಿ ಮತ್ತು ಎಚ್.ಕೆ ಪಾಟೀಲ್ ಅವರ ನಡುವೆ ಕೆಲ ಕಾಲ ವಾಗ್ವಾದವೂ ನಡೆಯಿತು.

ಕರ್ನಾಟಕ ಕೈಗಾರಿಕಾ ನೀತಿ 2020-25ರಲ್ಲಿ ಪ್ರಸ್ತಾಪಿಸಿರುವ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶ 2020ನೇ ಸಾಲಿನ ಕರ್ನಾಟಕ ಸ್ಟಾಂಪ್(2ನೇ ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆಯಿತು.

ಕಂದಾಯ ಸಚಿವ ಆರ್.ಅಶೋಕ್ ಮಂಡಿಸಿ ಈ ವಿಧೇಯಕವನ್ನು ಮಂಡಿಸಿ 2020-21ರ ಆಯವ್ಯಯ ಭಾಷಣದಲ್ಲಿ ಪ್ರಸ್ತಾಪಿಸಿರುವ 35 ಲಕ್ಷ ರೂ.ವರೆಗಿನ ಪ್ಲಾಟ್ ಅಥವಾ ಅಪಾರ್ಟ್ಮೆಂಟ್ ಗಳಿಗೆ ಮೊದಲ ಮಾರಾಟಕ್ಕೆ ಸ್ಟಾಂಪು ತೆರಿಗೆ ಕಡಿಮೆ ಮಾಡಲು ಈ ವಿಧೇಯಕ ತರಲಾಗಿದೆ ಎಂದರು.ಚೆರ್ಚೆಯ ನಂತರ ವಿಧೇಯಕವನ್ನು ಸಭಾಧ್ಯಕ್ಷರು ಮತಕ್ಕೆ ಹಾಕಿದ್ದಾಗ ಧ್ವನಿಮತದ ಒಪ್ಪಿಗೆ ದೊರೆಯಿತು.

ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ ವೇತನ,ಭತ್ಯೆ ಮತ್ತು ಸಂಕೀರ್ಣ ಉಪಬಂಧಗಳ (ನಿರಸನಗೊಳಿಸುವ) ವಿಧೇಯಕ 2020ಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆಯಿತು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮಂಡಿಸಿದ ವಿಧೇಯಕಕ್ಕೆ ಧ್ವನಿ ಮತದ ಒಪ್ಪಿಗೆ ದೊರೆಯಿತು.

ಕಂದಾಯ ಸಚಿವ ಆರ್.ಅಶೋಕ್ ಅವರು 2020ನೇ ಸಾಲಿನ ಕರ್ನಾಟಕ ಸ್ಟಾಂಪ್ (2ನೇ ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರೆ, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು 2020ನೇ ಸಾಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಮತ್ತು ಕೆಲವು ಇತರೆ ಕಾನೂನು ವಿಧೇಯಕವನ್ನು ಮಂಡಿಸಿದರು. ನಂತರ ಸಭಾಧ್ಯಕ್ಷರು ಕಲಾಪ ವನ್ನು ಮಧ್ಯಹ್ನದ ಬೋಜನ ವಿರಾಮಕ್ಕೆ ಮುಂದೂಡಿದರು.

Leave a Reply

Your email address will not be published. Required fields are marked *

error: Content is protected !!