ಮಾತೃಭಾಷೆಯ ಅಸ್ಮಿತೆಗೆ ಭಾಷಾಭಿಮಾನ ಅನಿವಾರ್ಯ: ತಾರಾ ಆಚಾರ್ಯ

ಉಡುಪಿ: ಮಾತೃ ಭಾಷೆಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ನೈಜ ಭಾಷಾಭಿಮಾನ ಅಗತ್ಯ. ಈ ನಿಟ್ಟಿನಲ್ಲಿ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ತುಳು ಭಾಷೆಯ ಬೆಳವಣಿಗೆಗೆ ಇಲ್ಲಿನ ದೇವಾಲಯಗಳು ವಿಶೇಷ ಸಹಕಾರ ನೀಡುತ್ತಿರುವುದು ಶ್ಲಾಘನೀಯ.  ಹಾಗೆಯೇ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ನಾವೆಲ್ಲ ಒಕ್ಕೊರಲಿನಿಂದ ಆಗ್ರಹ ಮಾಡಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ತಾರಾ ಉಮೇಶ್ ಆಚಾರ್ಯ ಹೇಳಿದರು. 

ಅವರು ಕೊಡವೂರಿನ ಶ್ರೀ ಶಂಕರನಾರಾಯಣ ದೇಗುಲದ ವತಿಯಿಂದ ತುಳು ಲಿಪಿ ಕಲಿಕಾ ತರಗತಿಯ ಆರಂಭ ಹಾಗೂ ದೇಗುಲದ ನಾಮಫಲಕಗಳನ್ನು ತುಳು ಲಿಪಿಯಲ್ಲಿ ಬರೆಯುವ ಪೂರ್ವಭಾವಿಯಾಗಿ ತುಳು ಲಿಪಿಯ ಫಲಕವನ್ನು ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಮಾತನಾಡಿ ಇಲ್ಲಿನ ಧಾರ್ಮಿಕ ಕೇಂದ್ರಗಳು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಹಿತ್ಯ , ಸಂಸ್ಕೃತಿಗಳನ್ನು ಉಳಿಸಲು ಶಕ್ತವಾಗಿರುವ  ನಮ್ಮ ತುಳು ಮಾತೃಭಾಷೆಯ ಬೆಳವಣಿಗೆಗೆ ನಿರಂತರ ಸಹಕಾರ ನೀಡಬೇಕಾಗಿದೆ ಎಂದು ಹೇಳಿದರು. 

ಮತ್ಸ್ಯೋದ್ಯಮಿಗಳಾದ ಸಾಧು ಸಾಲ್ಯಾನ್, ಆನಂದ ಪಿ ಸುವರ್ಣ, ಶೇಷಪ್ಪ ಕುಂದರ್, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕಾಂತಪ್ಪ ಕರ್ಕೇರ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಜ್ ಎ.ಸೇರಿಗಾರ್, ಸುಧಾ ಎನ್ ಶೆಟ್ಟಿ, ಬೇಬಿ ಎಸ್ ಮೆಂಡನ್ ಹಾಗೂ ರಂಜಿತ್ ಕೊಡವೂರು ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಸದಸ್ಯ  ಜನಾರ್ದನ್ ಕೊಡವೂರು ಸ್ವಾಗತಿಸಿದರು. ಸತೀಶ್ ಕೊಡವೂರು ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!