ಪ್ರಚೋದನಕಾರಿ ಗೋಡೆ ಬರಹ ಪ್ರಕರಣ – ಮೂರನೇ ಆರೋಪಿಗಾಗಿ ಶೋಧ

ಮಂಗಳೂರು: ನಗರದ ಎರಡು ಕಡೆ ಗೋಡೆ ಮೇಲೆ ಪ್ರಚೋದನಕಾರಿ ಬರಹಗಳು ಕಂಡು ಬಂದ ಪ್ರಕರಣಕ್ಕೆ  ಸಂಬಂಧಿಸಿದಂತೆ ಮೂರನೇ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಕ್ (22) ಮತ್ತು ಮಾಝ್ ಮುನೀರ್ ಅಹಮ್ಮದ್ (21) ರನ್ನು ಬಂಧಿಸಲಾಗಿದೆ.

ಮೂರನೇ ಆರೋಪಿ ಶಾರೀಕ್ ಅವನ ಚಿಕ್ಕಪ್ಪ ಎಂದು ಹೇಳಲಾಗುತ್ತಿದ್ದು, ಈ ಕೃತ್ಯ ಎಸಗಲು ಶಾರಿಕ್‌ಗೆ ಉತ್ತೇಜನ ನೀಡಿದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೂರನೆ ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದು ವರೆಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಮಂಗಳೂರಿನ ಬಿಜೈನ ಅಪಾರ್ಟ್ಮೆಂಟ್‌ವೊಂದರ ಗೋಡೆಯಲ್ಲಿ ಹಾಗೂ ನಗರದ ಕೋರ್ಟ್ ರೋಡ್‌ನಲ್ಲಿ ಕೋರ್ಟ್ ಗೆ ಸಮೀಪವಾಗಿರುವ ಕೋರ್ಟ್ ಪ್ರಿಮಿಸಸ್‌ನ ಹಳೇ ಪೊಲೀಸ್ ಔಟ್ ಪೋಸ್ಟ್ ನ ಗೋಡೆಯ ಮೇಲೆ ಪ್ರಚೋದನಕಾರಿ ಬರಹಗಳು ಕಂಡುಬಂದಿದ್ದವು. ಪ್ರಕರಣಕ್ಕೆ ಸಂಬಂದಿಸಿ ಇಬ್ಬರನ್ನು ಬಂಧಿಸಿದ್ದು, ಸದ್ಯ ಬಂಧಿತ ಆರೋಪಿಗಳಿಗೆ ನ್ಯಾಯಾಲಯದ ಆದೇಶದಂತೆ, ಕೊರೊನಾ ಪರೀಕ್ಷೆ ನಡೆಸಿದ್ದು, ಇಬ್ಬರಿಗೂ ನೆಗೆಟಿವ್ ವರದಿ ಬಂದಿದೆ. ಆದ್ದರಿಂದ ಪೊಲೀಸರು ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಮತ್ತೆ ತಮ್ಮ ಕಸ್ಟಡಿಗೆ ಕೋರಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!