ಹಿರಿಯ ಸಾಹಿತಿ, ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ವಿಧಿವಶ
ಉಡುಪಿ: ಹಿರಿಯ ಲೇಖಕ, ಕಥೆಗಾರರಾಗಿ ನಾಡಿನಾದ್ಯಂತ ಜನಪ್ರಿಯತೆ ಪಡೆದ ಉದ್ಯಾವರ ಮಾಧವ ಆಚಾರ್ಯ (79) ಅವರು ವಿಧಿವಶರಾಗಿದ್ದಾರೆ.
ಉದ್ಯಾವರ ಮಾಧವ ಆಚಾರ್ಯ ಅವರು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿರದೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು, ಅವರಲ್ಲೊಬ್ಬ ಅದ್ಬುತ ಕತೆಗಾರನಿದ್ದ, ಲೇಖಕನಿದ್ದ, ಸಹೃದಯಿ ಕವಿ, ನಟ, ನಿರ್ದೇಶಕನಿದ್ದ, ಯಕ್ಷಲೋಕದ ಯಾತ್ರಿಕರಾಗಿದ್ದ ಅವರು, ಮೋಡಿ ಮಾಡುವ ಮಾತುಗಾರರಾಗಿ, ಅರ್ಥಶಾಸ್ತ್ರ ಉಪನ್ಯಾಸಕರಾಗಿ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದ್ದರು.
1941ರ ಮಾರ್ಚ್ 25 ರಂದು ಜನಿಸಿದ ಇವರ ಉಡುಪಿಯ ಸಮೀಪದ ಕಲ್ಯಾಣಪುರದಲ್ಲಿ ಆರಂಭಿಕ ವಿದ್ಯಾಭ್ಯಾಸ ಪಡೆದ ಇವರು, ಎಂಜಿಎಂ ಕಾಲೇಜಿನಿಂದ ಬಿ.ಎ ಪದವಿಯನ್ನೂ, ಬೆಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಕುಂದಾಪುರದ ಭಂಡಾರ್ಕಸ್ ಕಾಲೇಜಿನಲ್ಲಿ ತಮ್ಮ ಉಪನ್ಯಾಸ ವೃತ್ತಿಯನ್ನು ಆರಂಭಿಸಿ, ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು, ಕುಂದಾಪುರದ ಬಿ.ಬಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇದೀಗ ಪೂರ್ಣ ನಿವೃತ್ತಿ ಜೀವನ ನಡೆಸುತ್ತಿದ್ದರು. ಇದೀಗ ಅಗಲಿಕೆ ಅವರ ಅಭಿಮಾನಿಗಳಿಗೆ ಅತೀವ ದುಖ ನೀಡಿದೆ.
ಅವರು, ಬೆಳಕಿನೆಡೆಗೆ, ಹಾಡಿ, ನೀಡು ಪಾಥೇಯವನು, ಸೀಳು ಬಿದಿರಿನ ಸಿಳ್ಳು, ರಂಗಪ್ರಬoಧಗಳು, ಸಾಹಿತ್ಯ ಸ್ಪಂದನ ಮೊದಲಾದ ಪ್ರಬಂಧ ಸಂಕಲನಗಳು, ಬಾಗಿದ ಮರ, ಭಾಗ ದೊಡ್ಡಮ್ಮನ ಕಥೆ, ಅಪರಾಧ ಸಹಸ್ರಾಣಿ ಕಥೆ ಕಥಾ ಸಂಕಲನ, ಇದ್ದಕ್ಕಿದ್ದಂತೆ ನಾಟಕ, ಎದೆಯೊಳಗಣ ದೀಪ, ಗೋಡೆ, ನೆನಪೆಂಬ ನವಿಲುಗರಿ, ಅಂಧಯುಗ, ಬ್ರಹ್ಮಕಪಾಲ, ಹೆಬ್ಬೆರಳು, ಮಾದ್ರಿಯ ಚಿತೆ, ಋತುಗೀತೆ, ಮುಕ್ತದ್ವಾರ, ಮೊದಲಾದ ನಾಟಕಗಳು ಮತ್ತು ನೃತ್ಯ ರೂಪಕಗಳನ್ನು ರಚಿಸಿದ್ದಾರೆ. ಇವರ ಸಣ್ಣ ಕಥೆಗಳು, ಗೀತರೂಪಕಗಳು, ಚಿಂತನಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಅದರೊಂದಿಗೆ ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದು, ಪ್ರಸಿದ್ಧ ಗುಡ್ಡದ ಭೂತ ಧಾರವಾಹಿಯಲ್ಲಿಯೂ ಪಾತ್ರ ನಿರ್ವಹಿಸಿದ್ದರು. ಸಮೂಹ ಎಂಬ ಪರಿಕಲ್ಪನೆಯಲ್ಲಿ ಒಂದು ಲಾಂಛನವನ್ನು ರೂಪಿಸಿ 1950-51ರಿಂದ ಸಂಯೋಜಿಸಿ, ನಿರ್ದೇಶಿಸಿ, ನಿರ್ಮಿಸಿದ ರಂಗಪ್ರಯೋಗಗಳು, ರಂಗಭೂಮಿಯ ಅಂಶಗಳನ್ನು ಯಕ್ಷಗಾನದೊಡನೆ ಮೇಳೈಸಿ ಕಲಾತ್ಮಕವಾಗಿ ರೂಪಿಸಿದ ಹಿರಿಮೆ ಇವರದ್ದು, ಇವರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕೊಡುಗೆಗೆ ರಂಗಭೂಮಿ ಕಲಾಸಂಸ್ಥೆಯಿAದ `ರಂಗವಿಶಾರದ’ ಬಿರುದು, 1999ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಷ್ಟೇ ಅಲ್ಲದೆ ಅನೇಕ ರಂಗಭೂಮಿ, ಸಾಹಿತ್ಯಿಕ, ನೃತ್ಯ ಕಾರ್ಯಕ್ರಮಗಳಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. 1997ರಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು ಸನ್ಮಾನಿತಗೊಂಡದ್ದರು. ಅಧ್ಯಾಪನ ವೃತ್ತಿಗೆ ವಿದಾಯ ಹೇಳಿದ ಅವರು ಸಣ್ಣಕಥೆಗಳ ಮೂಲಕ ತಮ್ಮನ್ನು ಕಂಡುಕೊoಡಿದ್ದರು. ಇವರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ಇವರು ಯಕ್ಷಗಾನ ವೃತ್ತಿ ಕಲಾವಿದರಿಗಾಗಿ ಆರಂಭಗೊಂಡ ‘ಪ್ರೊ. ಬಿ. ವಿ. ಆಚಾರ್ಯ ಯಕ್ಷನಿಧಿ’ಯ ಆರಂಭ ಕಾಲದಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸಿದ್ದರು. 2004ರಲ್ಲಿ ಇವರ ನೇತೃತ್ವದಲ್ಲಿ ಯಕ್ಷಗಾನ ಕಲಾರಂಗದ ತಂಡ ಅಮೇರಿಕಾದಲ್ಲಿ ಜರುಗಿದ ‘ಅಕ್ಕ ಸಮ್ಮೇಳನ’ದಲ್ಲಿ ಭಾಗವಹಿಸಿ ಅಮೇರಿಕದಾದ್ಯಂತ 11 ಕಡೆಗಳಲ್ಲಿ ಪ್ರದರ್ಶನ ನೀಡಿತ್ತು. ಆಚಾರ್ಯರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ. |