ಉಡುಪಿ ಶಾಸಕ ಅಧಿಕಾರಿಗಳೊಂದಿಗೆ ವೃಥಾ ಗರಂ: ಬ್ಲಾಕ್ ಕಾಂಗ್ರೆಸ್ ಆಕ್ಷೇಪ
ಉಡುಪಿ: ವೈದ್ಯಕೀಯ ಶಿಕ್ಷಣ ಸಚಿವರು ಜಿಲ್ಲಾ ಪ್ರವಾಸದಲ್ಲಿದ್ದಾಗ ಉಡುಪಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆಸಿದ ಪರೀಶೀಲನಾ ಸಭೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಕೋವಿಡ್-19 ಕ್ವಾರಂಟೈನ್ ನಲ್ಲಿದ್ದವರನ್ನು ಗಂಟಲು ದ್ರವ ಪರೀಕ್ಷಾ ವರದಿ ಬರದೆ ಮನೆಗೆ ಬಿಟ್ಟಿದ್ದಕ್ಕೆ ಜನಪ್ರತಿನಿಧಿಗಳನ್ನ ಪ್ರಶ್ನಿಸುತ್ತಿದ್ದಾರೆ, ಎಂದು ಹೇಳಿಕೆ ನೀಡಿದ ಇವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಆದೇಶವಾದಾಗ ಇವರು ನಿದ್ರೆಯಲ್ಲಿದ್ದರೇ? ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಹಿಂದೆ 14 ದಿನಗಳಿದ್ದ ಸರಕಾರಿ ಕ್ವಾರಂಟೈನ್ ಬದಲಿಗೆ 7 ದಿನಗಳ ಕ್ವಾರಂಟೈನ್ ಎಂದು ಬದಲಿಸಿ ನೀಡಿದ ಆದೇಶ ಎಷ್ಟು ಸರಿ? ಸಾವಿರಾರು ಸಂಖ್ಯೆಯಲ್ಲಿರುವ ಕ್ವಾರಂಟೈನ್ ನಲ್ಲಿದ್ದವರ ಮತ್ತು ಶಂಕಿತರ ಗಂಟಲ ದೃವ ಪರೀಕ್ಷೆಗೆ ಸ್ಯಾಂಪಲ್‌ಗಳನ್ನು ನಮ್ಮ ಜಿಲ್ಲೆಯಲ್ಲೇ ಪರೀಕ್ಷೆ ಮಾಡಲು ವ್ಯವಸ್ಥೆ ಮಾಡಲು ಸರಕಾರಿ ಕೋವಿಡ್ 19 ಪರೀಕ್ಷಾ ಪ್ರಯೋಗಾಲಯ ಪ್ರಾರಂಭಕ್ಕೆ ವಿಫಲವಾಗಿರುವ ಸರಕಾರಕ್ಕೆ ಒತ್ತಡ ಹೇರಿ ಮಾರ್ಚ್ ತಿಂಗಳಲ್ಲೇ ಪ್ರಾರಂಭಿಸಿದ್ದರೇ ಮತ್ತು ಪ್ರತಿ ದಿನದ ತಪಾಸಣೆ ನಡೆಸಿದ ಮಾದರಿಗಳ ವರದಿಗಳು ಅದೇ ದಿನ ಬರುವಂತೆ ವ್ಯವಸ್ಥೆ ಕಲ್ಪಿಸಿದ್ದರೆ ಶಂಕಿತರು ಮತ್ತು ಸೋಂಕಿತರಿಂದ ಅವರೊಂದಿಗಿದ್ದ ಆರೋಗ್ಯವಂತರಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿತ್ತು.
ಮುಂದಾಲೋಚನೆಯಿಲ್ಲದ ಸರಕಾರಿ ಆದೇಶದಿಂದಾಗಿ ಸೋಂಕಿತರ ಸಂಖ್ಯೆಗಳು ದಿನೇ ದಿನೇ ಏರಿಕೆ ಕಾಣುತ್ತಿದ್ದಂತೆ ತಮ್ಮ ಶಾಸಕತ್ವದ ವೈಫ್ಯಲ್ಯವನ್ನ ಮರೆಮಾಚಲು ಉಡುಪಿಯ ಜಿಲ್ಲಾಧಿಕಾರಿ ಕಛೇರಿಯ ಸಭೆಯಲ್ಲಿ ಪ್ರಶ್ನಿಸುವುದು ಎಷ್ಟು ಸರಿ?, ವಿಧಾನ ಸೌಧದಲ್ಲಿ ಮತ್ತು ಮುಖ್ಯಮಂತ್ರಿಗಳಲ್ಲಿ ಸರಕಾರದಿಂದ ಜಾರಿಗೊಂಡ ಆದೇಶಗಳನ್ನ ಹಿಂಪಡೆದು ಪರಿಸ್ಕ್ರಿತ ಆದೇಶಕ್ಕೆ ಕ್ರಮವಹಿಸಿ, ಸರಕಾರದಲ್ಲಿ ಧ್ವನಿಯೆತ್ತುವ ಬದಲು ಉಡುಪಿಯ ಜನರ ಕಣ್ಣಿಗೆ ಮಣ್ಣೆರಚಲು ಉಡುಪಿಯ ಸಭೆಯಲ್ಲಿ ಹೇಳಿಕೆ ನೀಡುವುದು ಎಷ್ಟು ಸರಿ ಎಂಬುದನ್ನ ಶಾಸಕರೇ ಉತ್ತರಿಸಬೇಕು.
ಸಾಮಾಜಿಕ ಜಾಲತಾಣದಲ್ಲಿ ಶಾಸಕರು, ಮತ್ತವರ ಬೆಂಬಲಿಗರು “ಅಧಿಕಾರಿಗಳ ನಡೆಗೆ ಶಾಸಕ ಗರಂ, ಸಚಿವರ ಮುಂದೆಯೇ ಅಧಿಕಾರಿಗಳ ನಡೆಗೆ ಶಾಸಕರ ಆಕ್ಷೇಪ” ಎಂಬ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದವರಿಗೆ ಸ್ವತ: ಜಿಲ್ಲಾಧಿಕಾರಿಯವರೇ ಕಮೆಂಟ್ ಮಾಡಿ “ಸುಳ್ಳು ಸುದ್ದಿ ಹಬ್ಬಿಸಬೇಡಿ, ಇದು ರಾಜ್ಯ ಮತ್ತು ಕೇಂದ್ರ ಸರಕಾರದ ಆದೇಶದ ಪಾಲನೆಯೇ ಹೊರತು ಅಧಿಕಾರಿಗಳ ಸ್ವಯಂ ನಿರ್ಧಾರವಲ್ಲ” ಎಂದು ಹಲವರಿಗೆ ತಾವೇ ಕಮೆಂಟ್ ಮಾಡಿ ಉತ್ತರಿಸಿರುವುದು ಕೂಡ ಶಾಸಕರಿಗೆ ನುಂಗಲಾರದ ತುತ್ತಾಗಿದೆ. ಸೋಂಕಿತರು ಮೂರು ಜನ ಇರುವಾಗ ಲಾಕ್‌ಡೌನ್, 500 ಆದಾಗ ಎಲ್ಲವೂ ಸಡಿಲಿಕೆ ಹೀಗಿದೆ ಉಡುಪಿಯ ಪರಿಸ್ಥಿತಿ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಾಗೂ ಜನಪ್ರತಿನಿಧಿಗಳು ಆಯಾಯ ಸಮಯಕ್ಕೆ ಸರಿಯಾಗಿ ಅಗತ್ಯವುಳ್ಳ ಕ್ರಮವನ್ನು ಕೈಗೊಂಡು ಕೋವಿಡ್-19 ಹರಡದಂತೆ ಜನ ಸಂಕಷ್ಟಕ್ಕೆ ಒಳಗಾಗದಂತೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆ, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ಎಸ್.ಸಿ. ಸೆಲ್ ಅಧ್ಯಕ್ಷರಾದ ಗಣೇಶ್ ನೆರ್ಗಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಜನಾರ್ದನ ಭಂಡಾರ್ಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.