ಉಡುಪಿ: ಗ್ರಾ.ಪಂ. ಸಮಾಲೋಚನಾ ಸಭೆಯಲ್ಲಿ ಪ್ರಮೋದ್ ಮಧ್ವರಾಜ್ ಭಾಗಿ!

ಉಡುಪಿ: ಕಾಂಗ್ರೆಸ್ ಇಬ್ಬರು ಮಾಜಿ ಸಚಿವರಿಬ್ಬರ ಅಸಮಾಧಾನದ ಹೊಗೆ ಕಳೆದ ಭಾನುವಾರ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಉಡುಪಿ ಭೇಟಿ ಸಂದರ್ಭ ಜಗಜ್ಜಹೀರಾ ಆಗಿತ್ತು. ಈ ಬಗ್ಗೆ ಡಿಕೆ ಶಿವಕುಮಾರ್ ಅವರೇ ಕಾರ್ಯಕರ್ತರ ಸಭೆಯಲ್ಲಿ ಪಕ್ಷಕ್ಕಿಂತ ಯಾರು ಮೇಲಲ್ಲ, ಯಾವ ನಾಯಕನಿಂದಲೂ ಪಕ್ಷ ಇಲ್ಲ, ಯಾರೂ ಕೂಡ ಪಕ್ಷಕ್ಕೆ ಅನಿವಾರ್ಯವಲ್ಲ ಎಂದು ಗುಡಿಗಿದ್ದರು.

ಇದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರಾಜ್ಯಧ್ಯಕ್ಷರಾದ ಮೇಲೆ ಮೊದಲ ಜಿಲ್ಲಾ ಭೇಟಿ ಸಂದರ್ಭ ಗೈರಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಭೆಯಲ್ಲಿ ಮಾತನಾಡಿದ್ದರು.
ನಂತರ ಮಾಜಿ ಸಚಿವರಾದ ಪ್ರಮೋದ್ ಬೆಂಗಳೂರುಗೆ ದೌಡಾಯಿಸಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಸಮಾಜಾಯಿಸಿ ನೀಡದ್ದರು ಎನ್ನಲಾಗಿದೆ.

ಕಳೆದ ಹಲವಾರು ಸಭೆ ಮತ್ತು ಪ್ರತಿಭಟನೆಗಳಿಗೆ ಭಾಗವಹಿಸದೆ ಪ್ರಮೋದ್ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಾರದೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಡಿ. 6 ರಂದು ದಿಢೀರ್ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯ ಬಗ್ಗೆ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದಾರೆ.

ಸಮಾಲೋಚನಾ ಸಭೆಯಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್‌ ಮಾತನಾಡುತ್ತಾ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎಲ್ಲರೂ ನಾಯಕರು. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ನಾಯಕರಾಗಲು ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಸಭೆಯಲ್ಲಿ ಕೆಪಿಸಿಸಿಯ ಸಂಯೋಜಕರು ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರೂ ಆದ ವಿನಯ ರಾಜ್ ಅವರು ಮಾತನಾಡುತ್ತಾ ರಾಜ್ಯದಲ್ಲಿ ಸಿದ್ಧರಾಮಯ್ಯನವರ ನೇತೃತ್ವ ದ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ ಅನ್ನಭಾಗ್ಯ ಯೋಜನೆಯಲ್ಲಿ ಪಡಿತರ ಚೀಟಿಗೆ ಪ್ರತೀ ಕುಟುಂಬಕ್ಕೆ ನೀಡುವ ಅಕ್ಕಿಯ ಪ್ರಮಾಣವನ್ನು ಕಡಿತಗೊಳಿಸಿ ರಾಜ್ಯದ ಬಿಜೆಪಿ ಸರಕಾರ ಜನರಿಗೆ ಅನ್ಯಾಯ ಮಾಡಿದೆ. ವಸತಿ ನೀಡುತ್ತೇನೆ ಎಂದು ಹೇಳಿ ಜನರಿಗೆ ವಿತರಿಸುವಲ್ಲಿ ಎಡವಿದೆ.

ಕೇಂದ್ರದಲ್ಲಿ, ರಾಜ್ಯದಲ್ಲಿ ಅಲ್ಲದೆ ಬಹುತೇಕ ಸ್ಥಳೀಯ ಸಂಸ್ಥೆಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದರೂ ಕೂಡಾ ಜನಪರ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಆದುದರಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಅತೀ ಅವಶ್ಯವಾಗಿದೆ ಎಂದು ಅಭಿಪ್ರಾಯಪಟ್ಟರು ಸಭೆಯ ಪ್ರಾರಂಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ ಮಹಾ ಪರಿನಿರ್ವಾಣ ದಿನದ ಸ್ಮರಣಾರ್ಥ ಅವರ ಭಾವಚಿತ್ರಕ್ಕೆ ಪ್ರಮೋದ್ ಮಧ್ವರಾಜ್‌ರವರು ಪುಷ್ಪ ನಮನ ಸಲ್ಲಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ದಿನೇಶ್ ಪುತ್ರನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಬಿ. ನರಸಿಂಹ ಮೂರ್ತಿ, ವೈ .ಸುಕುಮಾರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕುಶಲ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಕೀರ್ತಿ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಎಸ್.ಟಿ. ಘಟಕದ ಅಧ್ಯಕ್ಷರಾದ ಅನಂತ್ ನಾಯಕ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಜಿಲ್ಲಾ ಎನ್.ಎಸ್.ಯು.ಐ. ಅಧ್ಯಕ್ಷ ಸೌರಭ್ ಬಲ್ಲಾಳ್, ಮಾಜಿ ನಗರಸಭಾ ಅಧ್ಯಕ್ಷರುಗಳಾದ ಯುವರಾಜ್, ಮೀನಾಕ್ಷಿ ಮಾಧವ, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ಸೆಲಿನ್ ಕರ್ಕಡ, ವಿಜಯ ಪೂಜಾರಿ ಬೈಲೂರು ಮೊದಲಾದವರು ಉಪಸ್ಥಿತರಿದ್ದರು. ಎಸ್.ಸಿ. ಘಟಕದ ಅಧ್ಯಕ್ಷರಾದ ಗಣೇಶ್ ನೆರ್ಗಿಯವರು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!