ಕಾಪು: ಅನ್ನಭಾಗ್ಯದ ಅಕ್ಕಿ ಮಾರಾಟ ಯತ್ನ ಮೂವರ ಬಂಧನ
ಕಾಪು: ಮನೆ ಮನೆಯಿಂದ ಅನ್ನಭಾಗ್ಯದ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತಿದ್ದ ಕಾಪು ಪೊಲೀಸರು ಹಾಗೂ ಆಹಾರ ನಿರೀಕ್ಷಕರ ತಂಡ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಮೂಡು ಗೋಪಾಡಿ ಬಿಜಾಡಿಯ ಇಮ್ತಿಯಾಜ್ ಅಹಮ್ಮದ್, ಕುಂದಾಪುರದ ಮಾವಿನ ಕಟ್ಟೆ ಕುರ್ಕುಂಜೆ ನಿವಾಸಿ ಮಹಮ್ಮದ್ ನಾಸೀರ್, ಕೋಟೇಶ್ವರದ ಹಳೆ ಅಳಿವೆ ನಿವಾಸಿ ಮಹಮ್ಮದ್ ತಯೂಬ್ ಎಂದು ಪೊಲೀಸರು ತಿಳಿಸಿರುತ್ತಾರೆ. ಆಹಾರ ನಿರೀಕ್ಷಕ. ಟಿ. ಲೀಲಾನಂದ ದೂರಿನ ಮೇರೆಗೆ ಭಾನುವಾರ ಕೋಟೆ ಗ್ರಾಮದ ಸುಮಿತ್ರಾ ಜನರಲ್ ಸ್ಟೋರ್ ಸಮೀಪ ಕಾರ್ಯಾಚರಣೆ ನಡೆಸುತಿದ್ದಾಗ ಕಾರನ್ನು ತಡೆದು ನಿಲ್ಲಿಸಿದಾಗ ಅದರಲ್ಲಿದ್ದ ಚಾಲಕನು, ಚಾಲಕನ ಪಕ್ಕದ ಸೀಟಿನಲ್ಲಿ ಮತ್ತು ಚಾಲಕನ ಹಿಂಬದಿ ಸೀಟಿನಲ್ಲಿ ಕುಳಿತಿದ್ದವನು, ಓಡಲು ಯತ್ನಿಸಿದ್ದರು. ಪೊಲೀಸರು ಅವರನ್ನು ಹಿಡಿದು ಕಾರನ್ನು ಪರಿಶೀಲಿಸಿದಾಗ ಚಾಲಕನ ಸೀಟಿನ ಹಿಂಬದಿಯಲ್ಲಿ ಪ್ಲಾಸ್ಟಿಕ್ ಚೀಲಗಳು ಕಂಡುಬಂತು. ಇದರಲ್ಲಿ ಅಕ್ಕಿ ತುಂಬಿದ 16 ಚೀಲಗಳಿದ್ದು, ಪ್ರತಿಯೊಂದು ಚೀಲವು 35 ಕೆ.ಜಿ . ತೂಕವಿದ್ದು ಒಟ್ಟು 560 ಕೆ.ಜಿ. ಕಂಡುಬಂತು. ಆರೋಪಿಗಳು ಮನೆ ಮನೆಗೆ ಹೋಗಿ ಸರಕಾರದಿಂದ ಉಚಿತವಾಗಿ ದೊರೆಯುವ ಅಕ್ಕಿಯನ್ನು ಖರೀದಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ತಿಳಿಸಿರುತ್ತಾರೆ . |