ರಂಗಕರ್ಮಿ ಜಯಕರ್ ಮಣಿಪಾಲರವರ ‘ವಿಜಯಧಾರ’ ನಾಟಕ ಕೃತಿ ಬಿಡುಗಡೆ
ಮಣಿಪಾಲ: ನಟ, ನಿರ್ದೇಶಕ, ನಿರ್ಮಾಪಕ ಜಯಕರ್ ಮಣಿಪಾಲರವರ ನೂತನ ವಿಜಯಧಾರ (ಕರ್ಣ ಪರ್ವ) ನಾಟಕ ಕೃತಿಯ ಅನಾವರಣ ಕಾರ್ಯಕ್ರಮ ಮಣಿಪಾಲದ ಮಂಚಿಕೆರೆ ಶ್ರೀ ವಾಸುಕಿ ನಾಗಯಕ್ಷಿ ಸನ್ನಿಧಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಬಡಗುಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ ಕೃತಿಯನ್ನು ಅನಾವರಣಗೊಳಿಸಿದರು. ಈ ವೇಳೆ ಕೃತಿಯ ಬರಹಗಾರ ಜಯಕರ್ ಅವರು ಮಾತನಾಡಿ, ರಂಗಪ್ರದರ್ಶನಗಳ ಒಳ ತಿರುಳುಗಳನ್ನು ಅದರ ವಿಭಿನ್ನತೆಯನ್ನು ಹಳ್ಳಿಯ ವಾತಾವರಣಗಳಿಗೆ ವಿಸ್ತರಿಸಿ ಅಲ್ಲಿನ ಪ್ರತಿಭೆಗಳಿಗೆ ರಂಗ ನಾಟಕಗಳನ್ನು ಪರಿಚಯಿಸಿ ಅವರಿಂದಲೇ ನಾಟಕ ಪ್ರದರ್ಶನಗಳನ್ನು ಪ್ರಸ್ತುತ ಪಡಿಸುವ ಉದ್ದೇಶದಿಂದ ಈ ವಿನೂತನ ಪ್ರಯತ್ನಗಳು ನಡೆಯುತ್ತಿವೆ. ಈ ಕಾರಣದಿಂದ ಇದರ ಚಾಲನೆಯನ್ನು ಗ್ರಾಮ ಮಟ್ಟದಲ್ಲಿಯೇ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಉಡುಪಿ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ಖ್ಯಾತ ಉದ್ಯಮಿ ಬಳ್ಕೂರು ಗೋಪಾಲ್ ಆಚಾರ್ಯ, ರಂಗ ನಿರ್ದೇಶಕರುಗಳಾದ ರವಿರಾಜ್ ಎಚ್ ಪಿ, ಸೋಮನಾಥ್ ಚಿಟ್ಪಾಡಿ, ರಾಘವೇಂದ್ರ ಕಟಪಾಡಿ, ಯೋಗೀಶ್ ಕೊಳಲಗಿರಿ ಮತ್ತಿತರರು ಉಪಸ್ಥಿತರಿದ್ದರು.