ಮಂಗಳೂರಿನ “ಜ್ಯೋತಿ” ಇನ್ನು ನೆನಪು ಮಾತ್ರ!
ಮಂಗಳೂರಿನ ಹೃದಯ ಭಾಗದಲ್ಲರವ ಬಲ್ಮಠ ಬಸ್ ತಂಗುದಾಣ ಅಂದ್ರೆ ಯಾರಾದರು ಒಮ್ಮೆ ಯಾವುದು ಅಂತ ಯೋಚನೆ ಯೋಚಿಸುತ್ತಾರೆ. ಯಾಕೆಂದ್ರೆ ಆ ಬಸ್ ತಂಗುದಾನಕ್ಕೆ ಬಲ್ಮಠ ಎಂದು ಕರೆಯೋದಕ್ಕಿಂತ ಅಲ್ಲಿ ಚಿತ್ರ ಮಂದಿರದ ಹೆಸರಾದ “ಜ್ಯೋತಿ” ಎಂದು ಹೇಳುವುದೇ ಹೆಚ್ಚಾಗಿ ಕೇಳುತ್ತೇವೆ.
ಹೌದು, 50 ವರ್ಷಗಳಿಂದ ನಗರದ ಪ್ರಸಿದ್ಧ ಲ್ಯಾಂಡ್ ಮಾರ್ಕ್ ಆಗಿದ್ದ, ಮಂಗಳೂರಿಗರಿಗೆ ಹೆಮ್ಮೆಯ ಗುರುತಾಗಿದ್ದ ಜ್ಯೋತಿ ಚಿತ್ರಮಂದಿರ ಇನ್ನು ಬರೀ ನೆನಪು ಮಾತ್ರ. ಕೊರೋನಾ ಮಹಾಮಾರಿ ಬರೇ ಚಿತ್ರ ರಂಗಕ್ಕೆ ಮಾತ್ರವಲ್ಲದೆ ಅದನ್ನೇ ನಂಬಿಕೊoಡಿದ್ದ ಚಿತ್ರ ಮಂದಿರಗಳಿಗೂ ದೊಡ್ಡ ಹೊಡೆತ ನೀಡಿತ್ತು. ಇದೀಗ ಲಾಕ್ ಡೌನ್‌ನಿಂದಾಗಿ ಮುಚ್ಚಲ್ಪಟ್ಟಿದ್ದ ಚಿತ್ರಮಂದಿರ ಇನ್ನು ಶಾಶ್ವತವಾಗಿ ಮುಚ್ಚಲಿದೆ ಎಂಬ ಸುದ್ಧಿಯೊಂದು ಹರಿದಾಡುತ್ತಿದೆ.. ಇದು ನಗರದ ಸಿನಿ ಪ್ರೇಮಿಗಳಿಗೆ ಅತ್ಯಂತ ದುಃಖದ ಸಂಗತಿ ಎನಿಸಿದೆ. ಏಕೆಂದರೆ ಈ ಚಿತ್ರಮಂದಿರ ಅನೇಕ ಸಿನಿಮಾ ಪ್ರಿಯರಿಗೆ ಅದರಲ್ಲಿಯೂ ವಿಶೇಷವಾಗಿ ತುಳು ಸಿನೆಮಾ ಪ್ರಿಯರ ಅಚ್ಚುಮೆಚ್ಚಿನ ಚಿತ್ರಮಂದಿರವಾಗಿತ್ತು.
ಮಂಗಳೂರಿಗರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದ ಈ ಚಿತ್ರಮಂದಿರದಲ್ಲಿ, ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್,ಅಂಬರೀಶ್ ಮತ್ತಿತರ ಸ್ಯಾಂಡಲ್ ವುಡ್‌ನ ಚಲನಚಿತ್ರ ತಾರೆಯರು ತಮ್ಮ ಚಲನಚಿತ್ರಗಳ ಬಿಡುಗಡೆಯ ಸಮಯದಲ್ಲಿ ಈ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದು ಇನ್ನು ಇತಿಹಾಸ. 50 ವರ್ಷಗಳಿಗಿಂತ ಹೆಚ್ಚಿನ ಇತಿಹಾಸ ಇರುವ ಈ ಚಿತ್ರಮಂದಿರ ಕೆಲವು ಮಲ್ಟಿಪ್ಲೆಕ್ಸ್ ಪ್ರದರ್ಶನಗಳನ್ನು ಹೊರತುಪಡಿಸಿ, ತುಳು ಚಲನಚಿತ್ರಗಳನ್ನು ಪ್ರದರ್ಶಿಸಿದ ಏಕೈಕ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜ್ಯೋತಿ ಟಾಕೀಸ್ ಎಂದೇ ಪ್ರಸಿದ್ಧಿ ಪಡೆದ ಈ ಚಿತ್ರ ಮಂದಿರಕ್ಕೆ ಪ್ರಾದೇಶಿಕ ಸಿನೆಮಾದ ಅಭಿಮಾನಿಗಳು ಹೆಚ್ಚು ಆದ್ಯತೆ ನೀಡುತ್ತಿದ್ದರು. ಏಕೆಂದರೆ, ಇದು ವಾರಕ್ಕೊಮ್ಮೆ ತುಳು ಮತ್ತು ಕನ್ನಡ ಚಲನಚಿತ್ರಗಳ ಪ್ರದರ್ಶನದ ವೇದಿಕೆಯಾಗಿತ್ತು. ಇದರೊಂದಿಗೆ, ಇಲ್ಲಿಯವರೆಗೆ, ತುಳು ಚಲನಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರ ಬಿಡಗಡೆಗೊಳಿಸುವ ಸಮಯದಲ್ಲಿ ಜ್ಯೋತಿ ಚಿತ್ರಮಂದಿರಕ್ಕೆ ಮೊದಲ ಆದ್ಯತೆ ನೀಡುತ್ತಾ ಬಂದಿದ್ದಾರೆ.
ಮೂಲಗಳ ಪ್ರಕಾರ, ಹಲವಾರು ವರ್ಷಗಳ ಹಿಂದೆ ಕರ್ನಾಟಕ ಥಿಯೇಟರ್ಸ್ ಯುನಿಟ್ ಲಿಮಿಟೆಡ್, ಮುಂಬೈ ಮೂಲದ ಬಿಲ್ಡರ್ ಜೊತೆ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಒಪ್ಪಂದ ಮಾಡಿಕೊಂಡಿದೆ. ಆದರೆ ತಾಂತ್ರಿಕ ಅಚಣೆಗಳಿಂದಾಗಿ ಇದುವರೆಗೆ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಿರಲಿಲ್ಲ. ಈಗ, ಕೋವಿಡ್ -೧೯ ಸಾಂಕ್ರಾಮಿಕ ರೋಗದಿಂದಾಗಿ ಚಿತ್ರಮಂದಿರ ಮುಚ್ಚಿರುವುದರಿಂದ, ಚಿತ್ರಮಂದಿರವನ್ನು ಇನ್ನೆಂದೂ ತೆರೆಯಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಈ ಹಿಂದೆ ಮಾಡಿಕೊಂಡಿರುವ ಒಪ್ಪಂದದ ವಾಣಿಜ್ಯ ಸಂಕೀರ್ಣ ನಿರ್ಮಾಣದ ಕೆಲಸವು 2021ರ ಜನವರಿ ಅಥವಾ ಫೆಬ್ರವರಿಯಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಮಂಗಳೂರಿನ ಸೆಂಟ್ರಲ್ ಚಿತ್ರ ಮಂದಿರ ಶಾಶ್ವತವಾಗಿ ಬಾಗಿಲು ಮುಚ್ಚಿದ ಬಳಿಕ, ಇದೀಗ ಅದರ ಸಾಲಿಗೆ ಜ್ಯೋತಿ ಟಾಕೀಸ್ ಸಹ ಸೇರುತ್ತಿದೆ ಎಂಬ ಸುದ್ದಿ ತುಳು ಚಿತ್ರೋದ್ಯಮದೊಂದಿಗೆ ಸಂಬoಧ ಹೊಂದಿರುವವರಿಗೆ ಹಾಗೂ ತುಳು ಚಿತ್ರ ರಸಿಕರಿಗೆ ಬೇಸರವನ್ನುಂಟು ಮಾಡಿದೆ.