ಕನಕ ಮಾಲ್ ವಿವಾದ ಸುಖಾಂತ್ಯ: ಸೋದೆ ಶ್ರೀ
ಉಡುಪಿ: ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನರಾದ ಬಳಿಕ ದ್ವಂದ್ವ ಮಠದ ನೆಲೆಯಲ್ಲಿ ಶೀರೂರು ಮಠದ ಆಡಳಿತವನ್ನು ಕೈಗೆತ್ತಿಕೊಂಡು ರೂ. 49.87 ಲಕ್ಷ ವೆಚ್ಚದಲ್ಲಿ ಮೂಲ ಮಠ ಹಾಗೂ ರೂ. 20 ಲಕ್ಷ ವೆಚ್ಚದಲ್ಲಿ ಉಡುಪಿ ಮಠವನ್ನು ಜೀರ್ಣೋದ್ಧಾರ ಮಾಡಲಾಗಿದೆ ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಶೀರೂರು ಮಠದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಶೀರೂರು ಮಠದ ಆಸ್ತಿಗಳಿಂದ ಬಂದ ಆದಾಯವನ್ನು ಬಳಸಿಕೊಂಡು ಶೀರೂರು ಮೂಲಮಠದಿಂದ 2 ಕಿ.ಮೀ ದೂರದ ಸಾಂತ್ಯಾರು ಮಠವನ್ನು ನವೀಕರಣ ಮಾಡಲಾಗುತ್ತಿದೆ. ಹನುಮ ಜಯಂತಿ ಒಳಗೆ ದೇವರ ಪ್ರತಿಷ್ಠಾಪನೆ ನಡೆಯಲಿದೆ. ಊರಿನವರ ಸಹಕಾರದಿಂದ ದುರ್ಗಾ ಪರಮೇಶ್ವರಿ ಅಮ್ಮನವರ ಗದ್ದುಗೆ ನವೀಕೃತಗೊಂಡಿದೆ. ಹಿರಿಯಡ್ಕ ಸಮೀಪದ ಪಾಪುಜೆ ಮಠವನ್ನು ಜೀರ್ಣೋದ್ಧಾರ ಸಂಕಲ್ಪ ಮಾಡಲಾಗಿದೆ. ಶೀರೂರು ಶ್ರೀಗಳ ನಿಧನದ ನಂತರ ಮಠದ ಯಾವ ಸ್ವತ್ತುಗಳನ್ನು ಮಾರಾಟ ಅಥವಾ ಪರಭಾರೆ ಮಾಡಿಲ್ಲ ಎಂದರು.
ಶಿರೂರು ಮಠಕ್ಕೆ ಯೋಗ್ಯ ವಟುವನ್ನು ಆಯ್ಕೆ ಮಾಡಿದ್ದೇವೆ. ಆತನಿಗೆ ವೇದಾಭಾಸ್ಯಗಳ ತರಬೇತಿ ನೀಡಲಾಗುತ್ತಿದೆ. ಇದಕ್ಕೆ ಅಷ್ಟಮಠಗಳ ಹಿರಿಯ ಮಠಾಧೀಶರ ಪ್ರೋತ್ಸಾಹ, ಸಹಕಾರವಿದೆ. ಎಲ್ಲರೂ ಮನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಶಿರೂರು ಮಠ ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ ವೃಂದಾವನವೃಸ್ಥರಾದ ಮೇಲೆ ಮಠದ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಸೋದೆ ಮಠದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿ, ‘ಕಲ್ಸಂಕದಲ್ಲಿರುವ ಶೀರೂರು ಮಠದ ಕನಕ ಮಾಲ್ ವಿವಾದ ಬಗೆಹರಿಯುವ ಹಂತಕ್ಕೆ ಬಂದಿದ್ದು, ಶೀಘ್ರ ಮಾಲ್ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂಬೈನ ಉದ್ಯಮಿಯೊಬ್ಬರು ಕಾಮಗಾರಿ ಕೈಗೆತ್ತಿಕೊಳ್ಳಲಿದ್ದು, ಕಟ್ಟಡದಲ್ಲಿ ಮಠಕ್ಕೆ ಸೇರಬೇಕಾದ ಜಾಗವನ್ನು ಹಸ್ತಾಂತರಿಸಲಿದ್ದಾರೆ. ಮಾಲ್‌ನಲ್ಲಿ ಕೊಠಡಿಗಳನ್ನು ಪಡೆಯಲು ಮುಂಗಡ ನೀಡಿದ್ದ 10 ಮಂದಿಗೆ ರೂ. 10 ಕೋಟಿ ಮರುಪಾವತಿಸಲು ಒಪ್ಪಿಕೊಂಡಿದ್ದಾರೆ. ಹಣದ ಬದಲಾಗಿ ಕೊಠಡಿ ಬೇಕಿದ್ದವರಿಗೆ ಕೊಡಲೂ ಸಿದ್ಧರಿದ್ದಾರೆ ಎಂದು ತಿಳಿಸಿದರು.
ಸಾಲ ತೀರುವಳಿ: ಕನಕ ಮಾಲ್ ನಿರ್ಮಾಣಕ್ಕೆ ಶೀರೂರು ಮಠವು ಕಾರ್ಪೊರೇಷನ್ ಬ್ಯಾಂಕ್‌ನಿಂದ ಪಡೆದಿರುವ ಸಾಲದ ಪ್ರಸಕ್ತ ಮೌಲ್ಯ ರೂ. 26.50 ಕೋಟಿಗೆ ಏರಿಕೆಯಾಗಿತ್ತು. ಏಕ ಗಂಟಿನಲ್ಲಿ ರೂ. 10.75 ಕೋಟಿ ಮರುಪಾವತಿಸಲು ಬ್ಯಾಂಕ್ ಹಾಗೂ ಮಠದ ಮಧ್ಯೆ ಒಪ್ಪಂದ ಏರ್ಪಟ್ಟಿದ್ದು, ಉದ್ಯಮಿ ಮರುಪಾವತಿ ಮಾಡಲಿದ್ದಾರೆ. ಜತೆಗೆ ಕಟ್ಟಡ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ರೂ. 1.50 ಕೋಟಿ ಬಿಲ್ ಬಾಕಿ, ಶೀರೂರು ಮಠಕ್ಕೆ ರೂ. 5 ಕೋಟಿ ಪಾವತಿಸಲು ಒಪ್ಪಿಕೊಂಡಿದ್ದಾರೆ.
ಪರಸ್ಪರ ಮಾತುಕತೆಯ ಮೂಲಕ ಕನಕ ಮಾಲ್ ಕಟ್ಟಡ ಬಗೆಹರಿಯುವ ಹಂತಕ್ಕೆ ಬಂದಿದೆ. ಇದರ ಹಿಂದೆ, ಡಾ. ರವೀಂದ್ರನಾಥ್ ಶ್ಯಾನುಭೋಗ, ಪ್ರೊ.ಎಂ.ಬಿ. ಪುರಾಣಿಕ್, ತೋಟದ ಮನೆ ದಿವಾಕರ್ ಶೆಟ್ಟಿ ಹಾಗೂ ತೋನ್ಸೆ ಜಯಕೃಷ್ಣ ಶೆಟ್ಟಿ ಅವರ ಶ್ರಮವಿದೆ ಎಂದರು.
ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಪಲಿಮಾರು ಮಠದ ಪರ್ಯಾಯದ ಅವಧಿಯಲ್ಲಿ ಲಕ್ಷ್ಮೀವರ ತೀರ್ಥರು ನಿಧನರಾಗಿದ್ದು ತುಂಬಾ ನೋವುಂಟು ಮಾಡಿತು. ಅವರ ನಿಧನಾನಂತರ ಉತ್ತರಾಧಿಕಾರಿ ನೇಮಕವಾಗಲಿಲ್ಲ ಎಂಬ ಬಹುದಿನಗಳ ಕೊರಗು ಈಗ ನಿವಾರಣೆಯಾಗಿದ್ದು, ವಿಶ್ವವಲ್ಲಭ ತೀರ್ಥರು ಸೂಕ್ತ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ್ದಾರೆ ಎಂದರು.
ನಿಯೋಜಿತ ಉತ್ತರಾಧಿಕಾರಿ ವೇದ, ಶಾಸ್ತ್ರಗಳ ಅಧ್ಯಯನದಲ್ಲಿ ತೊಡಗಿದ್ದು, ಸೂಕ್ತ ಸಂದರ್ಭ ಪೀಠ ಏರಲಿದ್ದಾರೆ. ಶೀರೂರು ಮಠಕ್ಕೆ ಎದುರಾಗಿದ್ದ ಸಮಸ್ಯೆಗಳೆಲ್ಲ ಹಂತ ಹಂತವಾಗಿ ಬಗೆಹರಿಯುತ್ತಿವೆ ಎಂದರು.