ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್: ಉಡುಪಿ ಜಿಲ್ಲಾ ಕಾರ್ಯಾಲಯ ಉದ್ಘಾಟನೆ
ಉಡುಪಿ: (ಉಡುಪಿಟೈಮ್ಸ್ ವರದಿ)ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದರ ಉಡುಪಿ ಜಿಲ್ಲಾ ಕಾರ್ಯಾಲಯ ಉದ್ಘಾಟನಾ ಸಮಾರಂಭ ಇಂದು ಉಡುಪಿಯ ಶ್ರೀ ಕೃಷ್ಣ ಮಠದ ಪೇಜಾವರ ಮಠದ ವಿಜಯಧ್ವಜ ಬಳಿ ನಡೆಯಿತು. ಕಾರ್ಯಕ್ರಮವನ್ನು ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯ, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ಕಾರ್ಯಕ್ಕಾಗಿ, ಜನವರಿ 15 ವರೆಗೆ ನಿಧಿ ಸಮರ್ಪಣಾ ಅಭಿಯಾನ ನಡೆಯಲಿದೆ . ಈ ಅಭಿಯಾನದ ಜವಬ್ದಾರಿಯನ್ನು ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರಿಗೆ ವಹಿಸಲಾಗಿದ್ದು, ಸೀಮಿತ ಅವಧಿಯಲ್ಲಿ ಕಾರ್ಯಕರ್ತರು ಗ್ರಾಮದ ಮೂಲೆ ಮೂಲೆಗೆ ತೆರಳಿ, ಅಲ್ಲಿ ನೀಡುವ ದೇಣಿ, ಕಾಣಿಕೆಯನ್ನು ಸಂಗ್ರಹಿಸುತ್ತಾರೆ.
ಆದ್ದರಿಂದ ಮನೆ ಮನೆಗೆ ಬರುವ ವಿಎಚ್ ಪಿ ಕಾರ್ಯಕರ್ತರಿಗೆ ಮಾತ್ರ ದೇಣಿಗೆ ನೀಡಿ ರಶೀಧಿ ಪಡೆದುಕೊಳ್ಳಬೇಕು, ಬಡವ ಬಲ್ಲಿದ ಎಂಬ ಭೇದವಿಲ್ಲದೆ ಯಾರು ಬೇಕಾದರೂ 10 ರೂಪಾಯಿಯಿಂದ ಎಷ್ಟು ಬೇಕಾದರು ತಮ್ಮ ಇಚ್ಚೆಗೆ ಅನುಗುಣವಾಗಿ ದೇಣಿಗೆ ನೀಡಬಹುದಾಗಿದೆ. ಇದರ ಜೊತೆಗೆ ಈ ಸೀಮಿತ ಅವಧಿ ಮುಗಿದ ಬಳಿಕವೂ ದೇಣಿಗೆ ನೀಡಲು ಬಯಸುವವರು ಟ್ರಸ್ಟ್ನ ಖಾತೆಗೆ ನೇರವಾಗಿಯೂ ಜಮೆ ಮಾಡಬಹುದಾಗಿದೆ. ಅದರಂತೆ ರಾಮ ಸೇತುವೆ ಕಾರ್ಯದಲ್ಲಿ ಒಂದು ಅಳಿಲು ತನ್ನ ಸೇವೆ ನೀಡಿದಂತೆ, ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನಮ್ಮ ಕೊಡುಗೆಯನ್ನು ನೀಡಿ ರಾಮ ಮಂದಿರ ನಿರ್ಮಾಣಕ್ಕೆ ಸಹಕರಿಸುವಂತೆ ಕೊರಿದರು.
ಈ ಸಂದರ್ಭ ವಿಶ್ವ ಹಿಂದು ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ಪಿ.ವಿಷ್ಣುಮೂರ್ತಿ ಆಚಾರ್ಯ, ಸಂಘದ ಸಂಚಾಲಕ ನಾರಾಯಣ ಶೆಣೈ, ಪ್ರಾಂತೀಯ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ, ಶರಣ್ ಪಂಪ್ ವೆಲ್, ಸುನೀಲ್ ಕೆ.ಆರ್ ಉಪಸ್ಥಿತರಿದ್ದರು.