ವಿಪತ್ತು ನಿರ್ವಹಣೆಗೆ ಸದಾ ಸನ್ನದ್ಧವಾಗಿರಿ- ಸೆಂಥಿಲ್ ಕುಮಾರ್
ಉಡುಪಿ, ಡಿ. 4 : ಜಗತ್ತಿನಲ್ಲಿ ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನ
ಏರಿಕೆಯಿಂದ ಹೆಚ್ಚಿನ ಸಂಖ್ಯೆಯ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿದ್ದು, ಕರಾವಳಿ ಪ್ರದೇಶದಲ್ಲಿ ವಿಕೋಪಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರಲಿದ್ದು, ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ವಿಕೋಪ ಪರಿಸ್ಥಿತಿ ಎದುರಿಸಲು ಸದಾ ಸನ್ನದ್ಧವಾಗಿರಬೇಕು ಎಂದು 10 ನೇ ಎನ್.ಡಿ.ಆರ್.ಎಫ್ ತಂಡದ ಸಹಾಯಕ ಕಮಾಂಡೆoಟ್ ಸೆಂಥಿಲ್ ಕುಮಾರ್ ಹೇಳಿದರು.
ಅವರು ಶುಕ್ರವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಉಡುಪಿ ಜಿಲ್ಲೆಯಲ್ಲಿ ಎನ್.ಡಿ.ಆರ್.ಎಫ್ ತಂಡದಿoದ ನಡೆಯುವ ಅಣಕು ಪ್ರದರ್ಶನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಈ ಹಿಂದೆ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಪ್ರದೇಶಗಳನ್ನು ಹಾಗೂ ತಗ್ಗು ಪ್ರದೇಶಗಳನ್ನು ಪಟ್ಟಿ ಮಾಡಿಟ್ಟುಕೊಂಡು, ಈ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು
ಅನುಕೂಲವಾಗುವಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿರಬೇಕು. ಕೇಂದ್ರ ಮತ್ತು ರಾಜ್ಯ ವಿಪತ್ತು ಪ್ರಾಧಿಕಾರಗಳಿಂದ ವಿಕೋಪ ಕುರಿತು ಮಾಹಿತಿ ಬಂದ ಕೂಡಲೇ, ಜನ ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಇದಕ್ಕಾಗಿ ಸೂಕ್ತ ಪ್ರದೇಶವನ್ನು ಗುರುತಿಸಿಕೊಂಡಿರಬೇಕು ಎಂದು ಸೆಂಥಿಲ್ ಕುಮಾರ್ ತಿಳಿಸಿದರು.
ಪ್ರಸ್ತುತ ತಂತ್ರಜ್ಞಾನ ಸಾಕಷ್ಟು ಮುಂದುವರೆದಿರುವುದರಿ0ದ ಸುನಾಮಿ, ಚಂಡಮಾರುತದತಹ ವಿಕೋಪಗಳನ್ನು ಮುಂಚಿತವಾಗಿ ಗುರುತಿಸಲು ಸಾಧ್ಯವಿದೆ. ಇದರಿಂದ ನಾಗರೀಕರ ಜೀವ ಉಳಿಸಲು ಸಾಧ್ಯವಾಗಿದೆ. ರಕ್ಷಣಾ ಕಾರ್ಯದ
ಸಂದರ್ಭದಲ್ಲಿ ಮಕ್ಕಳು, ವೃದ್ದರು ಮತ್ತು ಹಿರಿಯ ನಾಗರೀಕರ ರಕ್ಷಣೆಗೆ ಆದ್ಯತೆ ನೀಡಬೇಕು, ಸಾರ್ವಜನಿಕರ ಜೀವ ಉಳಿಸಲು ಆದ್ಯತೆ ನೀಡಬೇಕು ಎಂದರು.
ಎನ್.ಡಿ.ಆರ್.ಎಫ್ ಮೂಲಕ ದೇಶದಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗುವ ಜಿಲ್ಲೆಗಳನ್ನು ಗುರುತಿಸಲಾಗಿದ್ದು, ಈ ಎಲ್ಲಾ ಜಿಲ್ಲೆಗಳಲ್ಲಿ 3 ವರ್ಷಗಳ ಒಳಗೆ ಅಣಕು ಕಾರ್ಯಾಚರಣೆ ಆಯೋಜಿಸುವ ಮೂಲಕ ವಿಕೋಪ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ವಿಧಾನಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಯಾವುದೇ ಅಗತ್ಯ ತರಬೇತಿ ಇಲ್ಲದಿದ್ದರೂ ಸಾಮಾನ್ಯ ವಿಧಾನಗಳ ಮೂಲಕ ಸಾರ್ವಜನಿಕರ ರಕ್ಷಣಾ ಕಾರ್ಯಚರಣೆ ಮತ್ತು ವಿಶೇಷ ರಕ್ಷಣಾ ಕಾರ್ಯಚರಣೆಯ ವಿಧಾನಗಳ ಮೂಲಕ ಸ್ಥಳೀಯ ಜಿಲ್ಲಾಡಳಿತದ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಸೆಂಥಿಲ್ ಕುಮಾರ್ ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ ಮತ್ತು ಸೆಪ್ಟಂಬರ್ ಮಾಹೆಯಲ್ಲಿ ಕಂಡು ಬಂದ ಅನಿರೀಕ್ಷಿತ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಸಾರ್ವಜನಿಕರ ಸಹಕಾರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಜೀವ ಹಾನಿಗೆ ಅವಕಾಶ ನೀಡಿಲ್ಲ, ವಿಕೋಪ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಲು ವಿಶೇಷ ತರಬೇತಿಯ
ಅಗತ್ಯವಿದ್ದು, ಎನ್.ಡಿ.ಆರ್.ಎಫ್ ತಂಡ ನೀಡುವ ತರಬೇತಿಯಲ್ಲಿ ಜಿಲ್ಲೆಯ ಪೊಲೀಸ್, ಅಗ್ನಿಶಾಮಕ ಮತ್ತು ಗೃಹ ರಕ್ಷಕ ಸೇರಿದಂತೆ ವಿವಿಧ ಇಲಾಖೆಗಳು ಭಾಗವಹಿಸಿ ಸೂಕ್ತ ರಕ್ಷಣಾ ವಿಧಾನಗಳನ್ನು ರೂಡಿಸಿಕೊಳ್ಳಬೇಕು ಹಾಗೂ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದ ಮೂಲಕ ವಿಕೋಪ ಸಂದರ್ಭದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹೇಳಿದರು.
ಈ ವರ್ಷ ಉಡುಪಿ ಜಿಲ್ಲೆಯಲ್ಲಿ ಡಿಸೆಂಬರ್ 1 ರ ವರೆಗೆ 4519 ಮಿ.ಮಿ ವಾಡಿಕೆ ಮಳೆ ಆಗಬೇಕಿದ್ದು, 5140 ಮಿ.ಮಿ ಮಳೆ ಆಗಿ ಶೇ.14 ರಷ್ಟು ಹೆಚ್ಚುವರಿ ಮಳೆ ಆಗಿದೆ. ಈ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ 77 ಗ್ರಾಮಗಳ 827 ಕುಟುಂಬದ 2874 ಮಂದಿಯನ್ನು ರಕ್ಷಿಸಿದ್ದು, 31 ಕಾಳಜಿ ಕೇಂದ್ರಗಳನ್ನು ತರೆಯಲಾಗಿತ್ತು, ಒಟ್ಟು 4518 ಹಾನಿ ಪ್ರಕರಣಗಳಲ್ಲಿ 11.64 ಕೋಟಿ ಅಂದಾಜು ನಷ್ಠ ಸಂಭವಿಸಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ರವಿ ಓಜನಹಳ್ಳಿ ಮಾಹಿತಿ ನೀಡಿದರು.
ಡಿಸೆಂಬರ್ 5 ರಂದು ಬೆಳಗ್ಗೆ 8.30 ರಿಂದ 9.30 ರ ವರೆಗೆ ಉದ್ಯಾವರ ನದಿ ತೀರದಲ್ಲಿ ಎನ್.ಡಿ.ಆರ್.ಎಫ್ ಮೂಲಕ ಅಣಕು ಕಾರ್ಯಚರಣೆ ನಡೆಯಲಿದೆ. ಸಭೆಯಲ್ಲಿ ಪೊಲೀಸ್, ಅಗ್ನಿಶಾಮಕ ಮತ್ತು ಗೃಹರಕ್ಷಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು
ಉಪಸ್ಥಿತರಿದ್ದರು.