ಮಲ್ಪೆ: ಬಯಲು ರಂಗಮಂದಿರ, ಉದ್ಯಾನ ಉದ್ಘಾಟನೆ
ಉಡುಪಿ: ಗೋವಾ ರಾಜ್ಯದ ಸಿಆರ್‌ಜೆಡ್ ಮಾದರಿಯನ್ನು ಕರ್ನಾಟಕ ದಲ್ಲಿ ಅನುಷ್ಠಾನಗೊಳಿಸುವ ಸಂಬಂಧ ಕರಡು ಸಿದ್ಧಪಡಿಸಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ಮಲ್ಪೆ ಸೀವಾಕ್ ಪ್ರದೇಶದಲ್ಲಿ ₹ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಯಲು ರಂಗಮಂದಿರ ಹಾಗೂ ಉದ್ಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಸಿಆರ್‌ಜೆಡ್ ನಿಯಮಗಳ ಅನುಷ್ಠಾನಕ್ಕೆ ವಿನಾಯಿತಿ ನೀಡಿದೆ. ಅದೇ ಮಾದರಿಯಲ್ಲಿ ರಾಜ್ಯಕ್ಕೂ ವಿನಾಯಿತಿ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಾಗುವುದು ಎಂದರು.
ಪಡುಕೆರೆ ಬೀಚ್‌ನಲ್ಲಿ ಮರೀನಾ ನಿರ್ಮಾಣ ಸಂಬಂಧ ಡಿಪಿಆರ್ ತಯಾರಿಗೆ ₹ 1ಕೋಟಿ ಬಿಡುಗಡೆ ಮಾಡಲಾಗುವುದು. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಮರೀನಾ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಮಲ್ಪೆಯಿಂದ ಪಡುಕೆರೆಗೆ ಕೇಬಲ್ ಕಾರ್ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ತಾಂತ್ರಿಕ ವಿಚಾರಗಳನ್ನು ತಜ್ಞರ ಜತೆ ಚರ್ಚಿಸಲಾಗುವುದು. ಜಿಲ್ಲೆಯ ಆಧ್ಯಾತ್ಮಿಕ ಪ್ರವಾಸೋದ್ಯಮ ಹಾಗೂ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದರೆ ಹಂತಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಎಂದು ಸಚಿವ ಬೊಮ್ಮಾಯಿ ಭರವಸೆ ನೀಡಿದರು.
ಸಿಆರ್‌ಜೆಡ್ ನಿಯಮಗಳಿಂದ ವಿನಾಯಿತಿ ಸಿಕ್ಕ ಬಳಿಕ ಕರಾವಳಿ ಪ್ರವಾಸೋದ್ಯಮದಲ್ಲಿ ಆಮೂಲಾಗ್ರ ಬದಲಾವಣೆಯಾಗಲಿದೆ. ಕೇರಳದಿಂದ ಗೋವಾ ಗಡಿಯವರೆಗಿನ ಕರಾವಳಿ ತೀರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬಹುದು ಎಂದು ಸಚಿವರು ಹೇಳಿದರು.
ಮಲ್ಪೆಗೆ ಸಂಪರ್ಕ ಕಲ್ಲಿಸುವ 5 ಕಿ.ಮೀ ಉದ್ದದ 100 ಅಡಿಯ ಚತುಷ್ಪಥ ರಸ್ತೆ ₹ 91 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಮುಂದಿನ ಡಿಸೆಂಬರ್‌ನೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತ ಪಡಿಸಿದರು.
ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಮಲ್ಪೆ ಸೀವಾಕ್ ಬಳಿಯ ಪ್ರದೇಶವನ್ನು ₹ 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೇವಲ 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಮುಕ್ತವಾಗಿರುವುದು ಸಂತಸದ ವಿಚಾರ. ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ಅಭಿನಂದಿಸಿದರು .