ಬೈಂದೂರು ಕೋವಿಡ್–19 ನಿರ್ವಹಣೆಯಲ್ಲಿ ಲೋಪ: ಕಾಂಗ್ರೆಸ್ ನಿಯೋಗದಿಂದ ದೂರು
ಬೈಂದೂರು: ತಾಲ್ಲೂಕಿನಲ್ಲಿ ವ್ಯಾಪಕ ವಾಗುತ್ತಿರುವ ಕೋವಿಡ್-19 ಪ್ರಕರಣಗಳನ್ನು ನಿಭಾಯಿಸಲು ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಜನ ಸಾಮಾನ್ಯರು ತೊಂದರೆ ಅನುಭವಿಸು ವಂತಾಗಿದೆ ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ನಿಯೋಗವು ಆರೋಪಿಸಿದೆ.
ಗುರುವಾರ ಬೈಂದೂರು ತಹಶೀಲ್ದಾರ್ ಬಸಪ್ಪ ಪಿ. ಪೂಜಾರ್ ಅವರನ್ನು ಭೇಟಿ ಮಾಡಿ ತಾಲ್ಲೂಕಿನಲ್ಲಿ ಕೋವಿಡ್–19 ಪ್ರಕರಣಗಳ ನಿರ್ವಹಣೆಯಲ್ಲಿನ ಗಂಭೀರ ಲೋಪಗಳ ಬಗ್ಗೆ ಗಮನ ಸೆಳೆಯಲಾಯಿತು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಕೋವಿಡ್–19 ನಿರ್ವಹಣೆಯಲ್ಲಿ ಗೊಂದಲ ನಿರ್ಮಾಣವಾಗುತ್ತಿದೆ. ತಪಾಸಣೆ ವರದಿ ನೆಗೆಟಿವ್ ಬಂದವರಿಗೆ ಅದರ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಪಾಟಿಸಿವ್ ಪ್ರಕರಣಗಳನ್ನು ಆಸ್ಪತ್ರೆಗೆ ಸೇರಿಸಲು ವಿಳಂಬ ಮಾಡಲಾಗುತ್ತಿದೆ. ಅವರನ್ನು ಮನೆಯಿಂದ ಕರೆದುಕೊಂಡು ಹೋಗುವ ಬದಲು ಹೆದ್ದಾರಿಗೆ ಬರಲು ತಿಳಿಸಲಾಗುತ್ತಿದೆ. ಇದು ಕ್ರೂರ ಕ್ರಮ. ಸೀಲ್‌ಡೌನ್ ಪ್ರಕ್ರಿಯೆಯಲ್ಲೂ ವಿಳಂಬ, ನಿರ್ಲಕ್ಷ್ಯ ಕಂಡು ಬರುತ್ತಿದೆ. ಇದರಿಂದ ಪರಿಸರದ ನಿವಾಸಿಗಳು ಆತಂಕ ಅನುಭವಿಸುವಂತಾಗಿದೆ. ಮುಂಬೈ ಮತ್ತು ಹೊರ ರಾಜ್ಯಗಳಿಂದ ಬರುವವರಿಗೆ ಸೌಲಭ್ಯ ಒದಗಿಸಲು ಅಗತ್ಯ ಎನಿಸಿದರೆ ಸಂಘ– ಸಂಸ್ಥೆಗಳು ಸಿದ್ಧವಾಗಿವೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ, ಲಾಕ್‌ಡೌನ್ ಆರಂಭದ ಹಂತದಲ್ಲಿ ಇಲಾಖೆಗಳ ನಡುವೆ ಇದ್ದ ಸಮನ್ವಯ ಈಗ ಇಲ್ಲ. ಸೋಂಕು ತಗಲಿ ದೃಢಪಟ್ಟ ಪ್ರಕರಣಗಳನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ. ಕೆಲವು ಗರ್ಭಿಣಿಯರ ಮತ್ತು ಗಂಭೀರ ಆರೋಗ್ಯ ಸಮಸ್ಯೆ ಇರುವವರ ಪರೀಕ್ಷಾ ವರದಿ ಬಾರದೇ ಇರುವುದರಿಂದ ಅವರು ತಮ್ಮ ನಿಯತಕಾಲಿಕ ತಪಾಸ ಣೆಗೆ ಆಸ್ಪತ್ರೆಗೆ ತೆರಳಲು ಆಗುತ್ತಿಲ್ಲ. ಅದರಿಂದಾಗಿ ಆರೋಗ್ಯ ಸಮಸ್ಯೆ ಉಲ್ಬ ಣಿಸಿದರೆ ಹೊಣೆ ಯಾರು ಎಂದರು.
ತಹಶೀಲ್ದಾರ್ ಪ್ರತಿಕ್ರಿಯಿಸಿ ಕ್ವಾರಂಟೈನ್‌ನಲ್ಲಿ ಇರುವ ಕೆಲವರು ಮೊಬೈಲ್ ಸಂಖ್ಯೆ ತಪ್ಪಾಗಿ ನೀಡಿರುವು ದರಿಂದ ಅವರ ನೆಗೆಟಿವ್ ವರದಿ ತಿಳಿಸಲಾಗುತ್ತಿಲ್ಲ. ಮುಂಬೈನಿಂದ ಬರುವವರಿಗೆ ಆಯಾ ಗ್ರಾಮಗಳಲ್ಲೇ ಕ್ವಾರಂಟೈನ್ ಮಾಡಿ ಅಲ್ಲಿಯೇ ಅಗತ್ಯ ವ್ಯವಸ್ಥೆ ಮಾಡುವ ನಿರ್ಣಯ ತೆಗೆದು ಕೊಳ್ಳಲಾಗಿದೆ. ಆರೋಗ್ಯ ಇಲಾಖೆ ಪಾಸಿಟಿವ್ ಇರುವ ವ್ಯಕ್ತಿಗಳನ್ನು ಗುರುತಿಸಿ ಮಾಹಿತಿ ನೀಡಿದರೆ ಮಾತ್ರ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೇರಿ ಸೀಲ್‌ಡೌನ್ ಮಾಡುತ್ತವೆ. ಕೆಲವೆಡೆ ವಿಳಂಬವಾಗಿದೆ ಮುಂದೆ ಸೂಕ್ತ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.
ಒಂದು ವಾರದ ಬಳಿಕವೂ ಅವ್ಯವಸ್ಥೆ ಮುಂದುವರೆದರೆ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಳ್ಳುವುದು ಎಂದು ಅಧ್ಯಕ್ಷ ಎಸ್. ಮದನಕುಮಾರ್ ಎಚ್ಚರಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ತಾಲ್ಲೂಕು ಪಂಚಾಯಿತಿ ಸದಸ್ಯ ಜಗದೀಶ ದೇವಾಡಿಗ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ಮೋಹನ ಪೂಜಾರಿ ಉಪ್ಪುಂದ, ನಾಗರಾಜ ಗಾಣಿಗ ಬಂಕೇಶ್ವರ, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಉಪ್ಪುಂದ ಇದ್ದರು.