ಕೊಡಚಾದ್ರಿ ಚಿತ್ರಮೂಲ ಗುಹಾಲಯಕ್ಕೆ ತಡೆ ಬೇಲಿ – ಪರಿಸರ ಸಂರಕ್ಷಣಾ ಟ್ರಸ್ಟ್ ಹೋರಾಟಕ್ಕೆ ಸಜ್ಜು?
ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕೆಯ ದೇವಿಯ ಯಾತ್ರೆ ಸಂಪನ್ನವಾಗಬೇಕಾದರೆ, ಸುಂದರ ಪ್ರಕೃತಿ ಮಡಿಲಲ್ಲಿರುವ ಕೊಡಚಾದ್ರಿಯ ತುತ್ತ ತುದಿಯಲ್ಲಿರುವ ಚಿತ್ರಮೂಲ ಗುಹೆಯ ಗಣಪತಿ ದರ್ಶನಾಗಲೇ ಬೇಕು ಆದರೆ ಈ ಗುಹೆ ಪ್ರವೇಶಿಸಲು ಅರಣ್ಯ ಇಲಾಖೆ ಕಬ್ಬಿಣದ ತಡೆ ಬೇಲಿ ನಿರ್ಮಿಸಿದ್ದು ಭಕ್ತರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಕೊಡಚಾದ್ರಿಯ ಸಂರಕ್ಷಣೆ ನೆಪವೊಡ್ಡಿ ಅರಣ್ಯ ಇಲಾಖೆ ಈ ಕ್ರಮಕ್ಕೆ ಪ್ರವಾಸಿಗರು, ಚಾರಣಿಗರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕೊಡಚಾದ್ರಿ ಬೆಟ್ಟದ ಸೂಕ್ಷ್ಮ ಜೀವ ವೈವಿಧ್ಯ ತಾಣವಾಗಿರುವ ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ದ ಪರಿಮಿತಿಗೆ ಸೇರುತ್ತದೆ. ಇಲ್ಲಿರುವ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಪ್ರವಾಸಿಗರ ಮೋಜು ಮಸ್ತಿಗಳಿಂದ ಪರಿಸರ ಮಾಲಿನ್ಯ , ಅರಣ್ಯ ಮತ್ತು ವನ್ಯ ಜೀವಿಗಳಿಗೆ ಹಾನಿಯುಂಟಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆ ಅಧಿಕಾರಿಗಳು ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಆದರೆ ಕೊಲ್ಲೂರಿಗೆ ದೇಶದ ವಿವಿದೆಡೆಗಳಿಂದ ಭೇಟಿ ನೀಡುವ ಭಕ್ತರು, ಅದರಲ್ಲೂ ನೆರೆಯ ಕೇರಳ, ತಮಿಳುನಾಡು, ಆಂಧ್ರ ಪ್ರದೇಶದಿಂದ ದಿನ ನಿತ್ಯ ಎಂಬಂತೆ ನೂರಾರು ಮೂಕಾಂಬಿಕೆಯ ಭಕ್ತರು ಆಗಮಿಸುತ್ತಾರೆ. ಈ ಭಕ್ತರ ನಂಬಿಕೆಯಂತೆ ಚಿತ್ರಮೂಲ ಗುಹೆಯ ದರ್ಶನದ ಬಳಿಕವೆ ಯಾತ್ರೆ ಪರಿಪೂರ್ಣ ಎಂದು ಭಾವಿಸುತ್ತಾರೆ. ಆದ್ದರಿಂದ ಅರಣ್ಯ ಇಲಾಖೆಯ ಈ ಕ್ರಮ ಭಕ್ತರ ಧಾರ್ಮಿಕ ನಂಬಿಕೆ ಹಾಗೂ ಭಕ್ತಿಗೆ ಅಡ್ಡಿಯುಂಟು ಮಾಡಿದಂತಾಗಿದೆ ಎಂದು ಭಕ್ತರು ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.
ಇದರೊಂದಿಗೆ ಕೊಡಚಾದ್ರಿ ಗಿರಿಯ ಮೇಲ್ಬಾಗದಲ್ಲಿ ರುವ ಪ್ರವಾಸಿ ಮಂದಿರ ಅನೈತಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆ ಈ ವಿಭಾಗಕ್ಕೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಕೊಡಚಾದ್ರಿಗೆ ಬೆಳಿಗ್ಗೆ 6 ರಿಂದ ಸಂಜೆ 4 ಗಂಟೆ ವರೆಗೆ ಮಾತ್ರ ಭೇಟಿ ನೀಡಲು ಸಮಯವಕಾಶವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಸರ್ವಜ್ಞ ಪೀಠ ದಲ್ಲಿ ಆರಂಭಗೊಂಡಿದ್ದ ಪೂಜಾ ಕೈಂಕರ್ಯಕ್ಕೂ ತಡೆಯೊಡ್ಡಲಾಗಿದೆ ಎಂದು ತಿಳಿದು ಬಂದಿದೆ.
ಶಂಕರಾಚಾರ್ಯರ ತಪಸ್ಥಳ, ಸೌಪರ್ಣಿಕೆಯ ಉಗಮಸ್ಥಾನ, ಮೂಕಾಂಬಿಕೆಯ ಮೂಲ ನೆಲೆ, ಚಿತ್ರ ಮೂಲ, ಹಾಗೂ ಅಂಬಾವನಕ್ಕೆ ಹೋಗುವ ದಾರಿಯ ಜೊತೆಗೆ ಗಣಪತಿ ಗುಹೆಗೆ ತೆರಳುವ ದಾರಿಯನ್ನು ಅರಣ್ಯ ಇಲಾಖೆ ಗೇಟ್ ಹಾಕಿ ಮುಚ್ಚಿಸಿದೆ. ಇದರಿಂದಾಗಿ ಸಾಕಷ್ಟು ಕರ್ನಾಟಕ, ಕೇರಳ, ತಮಿಳುನಾಡಿನ ವಿವಿಧ ಸ್ಥಳಗಳಿಂದ ಬರುವ ಭಕ್ರಾಧಿಗಳಿಗೆ ಬೇಸರ ತಂದಿದ್ದು, ಸಾವಿರಾರು ಭಕ್ತರಿಗೆ, ಸಾಧು ಸಂತರಿಗೆ ಈ ಪುಣ್ಯ ಕ್ಷೇತ್ರದ ದರ್ಶನದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಇದರ ಬಗ್ಗೆ ಸಂಭಂದಿಸಿದ ಇಲಾಖೆ, ಸರಕಾರ ತಕ್ಷಣ ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ಮಾಡಲಾಗುವುದೆಂದು ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್‌ನ ಗೌರವಧ್ಯಕ್ಷ ಕೇಮಾರು ಶ್ರೀಈಶ ವಿಠ್ಠಲ ಸ್ವಾಮೀಜಿ ಅವರು ಹಾಗೂ ಅಧ್ಯಕ್ಷ ಕೆ.ಕೆ ಸಾಬು ತಿಳಿಸಿರುತ್ತಾರೆ.