ಗ್ರಾ.ಪಂ. ಚುನಾವಣೆಯಲ್ಲಿ ಬಹುಮತದ ಜೊತೆಗೆ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಗುರಿ : ಕುಯಿಲಾಡಿ

ಉಡುಪಿ : ಬಿಜೆಪಿ ಎಲ್ಲ ಸ್ತರಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಈ ಸುಸಂದರ್ಭದಲ್ಲಿ ಘೋಷಣೆಯಾಗಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಬಿಜೆಪಿ 130ಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳನ್ನು ಗೆಲ್ಲಲಿದೆ. ಡಿ. 22 ಮತ್ತು 27 ರಂದು ಜಿಲ್ಲೆಯಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಹುಮತ ಸಾಧಿಸುವ ಜೊತೆಗೆ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗರಿಷ್ಠ ಸ್ಥಾನಗಳನ್ನು ಗೆಲ್ಲುವುದು ಬಿಜೆಪಿ ಗುರಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವ ಸಿದ್ಧತೆಗಾಗಿ ಡಿ.1ರಂದು ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಿಜೆಪಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಎದುರಿಸಲು ಸರ್ವ ಸನ್ನದ್ದವಾಗಿದೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷದ ರಾಜ್ಯ ನಾಯಕರ ಸಮಾಗಮದೊಂದಿಗೆ ಜಿಲ್ಲೆಯ 2 ಕಡೆಗಳಲ್ಲಿ ನಡೆದ ಮಂಡಲವಾರು ಗ್ರಾಮ ಸ್ವರಾಜ್ಯ ಸಮಾವೇಶಗಳು ಅತ್ಯಂತ ಯಶಸ್ವಿಯಾಗಿದ್ದು ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹಾಗೂ ಹೊಸ ಹುಮ್ಮಸ್ಸು ಮೂಡಿಸಿದೆ. ರಾಜ್ಯ ಬಿಜೆಪಿಯ ಸೂಚನೆಯಂತೆ ಪ್ರತೀ ಬೂತ್ ಮಟ್ಟದಲ್ಲಿ ಪಂಚರತ್ನ, ಪೇಜ್ ಪ್ರಮುಖ್ ನೇಮಕ, ಗ್ರಾಮ ಪಂಚಾಯತ್‌ಗಳ ಮಟ್ಟದಲ್ಲಿ ಕುಟುಂಬ ಮಿಲನ ಕಾರ್ಯಕ್ರಮಗಳ ಆಯೋಜನೆ ಪಕ್ಷ ಸಂಘಟನೆಗೆ ಶಕ್ತಿ ತುಂಬಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಚೈತನ್ಯ ತುಂಬಿದೆ ಎಂದರು.

ಪರಿಣಾಮಕಾರಿ ಚುನಾವಣಾ ಪೂರ್ವ ತಯಾರಿಗಾಗಿ ಮಂಡಲವಾರು ಚುನಾವಣಾ ಪ್ರಭಾರಿಗಳ ಜೊತೆಗೆ ಪ್ರತೀ ಮಹಾ ಶಕ್ತಿಕೇಂದ್ರ ವ್ಯಾಪ್ತಿಗೆ ಒಬ್ಬರಂತೆ ಪ್ರಮುಖರನ್ನು ನಿಯೋಜಿಸಲಾಗಿದೆ. ಒಮ್ಮತದ ಅಭ್ಯರ್ಥಿಗಳ ಆಯ್ಕೆ, ಮತದಾರರ ಪಟ್ಟಿ ಪರಿಶೀಲನೆ, ಬೂತ್ ಪ್ರಮುಖರೊಂದಿಗೆ ಸಭೆ, ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಾಧನೆಗಳು ಹಾಗೂ ಜನಪ್ರತಿನಿಧಿಗಳ ಅಭಿವೃದ್ಧಿ ಕೆಲಸ ಕಾರ್ಯಗಳ ಮಾಹಿತಿ, ಅಭ್ಯರ್ಥಿ ಪರಿಚಯ ಪತ್ರದ ಜೊತೆಗೆ ಚುನಾವಣಾ ಪ್ರಣಾಳಿಕೆ ಇತ್ಯಾದಿ ಪೂರ್ವ ಸಿದ್ದತೆಗಳೊಂದಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿತ ಪರಿಶ್ರಮದ ಮೂಲಕ ನಿಗದಿತ ಗುರಿ ತಲುಫುವ ತನಕ ವಿರಮಿಸದೆ ಎಲ್ಲಾ ಕಾರ್ಯಕರ್ತರು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಕುಯಿಲಾಡಿ ಕರೆ ನೀಡಿದರು.

ಬಿಜೆಪಿ ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಗ್ರಾಮ ಪಂಚಾಯತ್ ಚುನಾವಣೆ ಪಕ್ಷ ಸಂಘಟನೆಗೂ ಭದ್ರ ಬುನಾದಿಯಾಗಲಿದೆ. ಈ ನಿಟ್ಟಿನಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಮತ್ತು ಪಕ್ಷದ ಪ್ರಮುಖರು ಗ್ರಾಮ ಪಂಚಾಯತ್ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಡಳಿತದ ಸುವರ್ಣ ಯುಗದಲ್ಲಿ ಅಭಿವೃದ್ಧಿಯ ಶಖೆ ಮುಂದೆ ಸಾಗಲು ಎಲ್ಲರೂ ಕೈಜೋಡಿಸಬೇಕಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗ್ರಾಮ ಸ್ವರಾಜ್ಯ ಸಮಾವೇಶಗಳಿಗೆ ಶ್ರೀ ಕೃಷ್ಣನ ನಾಡು ಉಡುಪಿಯಲ್ಲೇ ಚಾಲನೆ ನೀಡುವ ಮೂಲಕ ಗ್ರಾಮ ಪಂಚಾಯತ್ ಚುನಾವಣೆಗೆ ಪಾಂಚಜನ್ಯವನ್ನು ಮೊಳಗಿದ್ದಾರೆ. ಪಕ್ಷದ ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಚುನಾವಣಾ ಪ್ರಚಾರ ಕಾರ್ಯದಲ್ಲಿ ವ್ಯವಸ್ಥಿತವಾಗಿ ಸಕ್ರಿಯವಾಗಿ ತೊಡಗಿಸಿಕೊಂಡು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಗರಿಷ್ಠ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಿಜಯ ಪತಾಕೆಯನ್ನು ಬಾನೆತ್ತರಕ್ಕೇರಿಸಲು ಬದ್ಧತೆಯಿಂದ ಶ್ರಮಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಗ್ರಾಮ ಪಂಚಾಯತ್ ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳ ಜವಾಬ್ದಾರಿ ನಿರ್ವಹಣೆಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಎಸ್. ಕಲ್ಮಾಡಿ ಸಾಗತಿಸಿ, ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!