ಉಳ್ಳಾಲ: ನಾಪತ್ತೆಯಾದ ಆರು ಮಂದಿ ಮೀನುಗಾರರ ಮೃತ ದೇಹ ಪತ್ತೆ
ಮಂಗಳೂರು: ಉಳ್ಳಾಲದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೃಹತ್ ಬೋಟೊಂದು ಸಮುದ್ರದಲ್ಲಿ 15 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಯಾಗಿ ನಾಪತ್ತೆಯಾದ ಆರು ಮಂದಿ ಮೀನುಗಾರರ ಮೃತದೇಹ ಇಂದು ಪತ್ತೆಯಾಗಿದೆ. ಬೊಕ್ಕಪಟ್ಲ ನಿವಾಸಿಗಳಾದ ಪಾಂಡುರಂಗ ಸುವರ್ಣ(58) ಹಾಗೂ ಪ್ರೀತಂ(25) ಅವರ ಮೃತದೇಹ ನಿನ್ನೆ ಪತ್ತೆಯಾಗಿತ್ತು. ಇಂದು ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಬೆಂಗ್ರೆಯ ಮುಹಮ್ಮದ್ ಅನ್ಸಾರ್ (32), ಮತ್ತು ಚಿಂತನ್ (21) ರ ಮೃತದೇಹ ಪತ್ತೆಯಾಗಿತ್ತು. ಮದ್ಯಾಹ್ನದ ವೇಳೆಗೆ ಕಸಬ ಬೆಂಗ್ರೆ ನಿವಾಸಿಗಳಾದ ಮುಹಮ್ಮದ್ ಹಸೈನಾರ್ (28), ಝಿಯಾವುಲ್ಲಾ (36) ಎಂಬವರ ಮೃತದೇಹ ಕೂಡ ಪತ್ತೆಯಾಗಿದೆ. ಈ ಮೂಲಕ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಆರು ಮಂದಿ ಮೀನುಗಾರರ ಮೃತದೇಹ ಸಿಕ್ಕಂತಾಗಿದೆ. ಮೀನುಗಾರಿಕೆಗಾಗಿ ನಗರದ ಬಂದರಿನಿಂದ ತೆರಳಿದ್ದ ‘ಶ್ರೀ ರಕ್ಷಾ’ ಎಂಬ ಹೆಸರಿನ ಪರ್ಸೀನ್ ಬೋಟ್ ಸೋಮವಾರ ರಾತ್ರಿ ಅರಬಿ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಬೋಟ್ ನಲ್ಲಿ ಒಟ್ಟು 25 ಮಂದಿ ತೆರಳಿದ್ದು, 19 ಮಂದಿ ಪಾರಾಗಿದ್ದರು. ಬೋಟ್ ಮುಳುಗಡೆಯಾಗಿ ಆರು ಮಂದಿ ನಾಪತ್ತೆಯಾಗಿದ್ದರು. |