600 ವರ್ಷಗಳ ಆಳ್ವಿಕೆಯಲ್ಲಿ ಹಿಂದೂ-ಮುಸ್ಲಿಮರಿಗೆ ಹುಟ್ಟಿದ ಸಾಕಷ್ಟು ಜನರಿದ್ದಾರೆ: ಸಿದ್ದರಾಮಯ್ಯ
ಬೆಂಗಳೂರು: ಲವ್ ಜಿಹಾದ್ ಮತ್ತು ಗೋಹತ್ಯೆ ವಿಚಾರದಲ್ಲಿ ಸರ್ಕಾರ ಕಾಯ್ದೆ ತರಲು ಮುಂದಾದರೆ ವಿರೋಧಿಸುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾಗಿ ಮಾತುಕತೆ ನಡೆಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರದ ಪಶುಸಂಗೋಪನಾ ಸಚಿವರು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವುದಾಗಿ ಹೇಳಿದ್ದರು, ಇದರಿಂದ ಆತಂಕಕ್ಕೀಡಾದ ಮುಸ್ಲಿಂ ಸಮುದಾಯದ ನಾಯಕರು ಇಂದು ನನ್ನನ್ನು ಭೇಟಿಯಾಗಿ,ಮಾತುಕತೆ ನಡೆಸಿದರು. ಈ ಕಾಯ್ದೆಯನ್ನು ಬಿಜೆಪಿ ಆಡಳಿತವಿರುವ ಗೋವಾದಲ್ಲಿ ಏಕೆ ಇದುವರೆಗೂ ಜಾರಿಗೊಳಿಸಿಲ್ಲ? ಕರ್ನಾಟಕವೇ ಏಕೆ? ಕಾಯ್ದೆ ಜಾರಿಯಾದರೆ ತಾವು ಕಷ್ಟ ನಷ್ಟಕ್ಕೆ ಈಡಾಗುತ್ತೇವೆ ಎಂಬ ಭಯದಿಂದ ಮುಸ್ಲಿಂ ಸಮುದಾಯದ ಮುಖಂಡರು ನನ್ನ ಬಳಿಗೆ ಬಂದಿದ್ದರು. ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬಂದಲ್ಲಿ ನಾವು ತೀವ್ರವಾಗಿ ವಿರೋಧಿಸಲಿದ್ದೇವೆ ಎಂದರು.
ಉತ್ತರ ಪ್ರದೇಶದಲ್ಲಿ ಜಾರಿಯಿರುವ ಲವ್ ಜಿಹಾದ್ ತಡೆ ಕಾನೂನು ಅಸಂವಿಧಾನಿಕ. ನಿಗದಿತ ವಯೋಮಾನಕ್ಕೆ ಮೇಲ್ಪಟ್ಟ ಪ್ರತಿಯೊಬ್ಬರಿಗೂ ತಮಗೆ ಇಷ್ಟವಾಗುವ ವ್ಯಕ್ತಿಯನ್ನು ಮದುವೆಯಾಗುವ ಸ್ವಾತಂತ್ರ್ಯ ಇದೆ. ಯಾವುದೇ ಒಂದು ಜಾತಿ ಇಂತಹುದೇ ಜಾತಿ – ಧರ್ಮದ ಹುಡುಗ ಅಥವಾ ಹುಡುಗಿಯನ್ನು ವಿವಾಹವಾಗಬೇಕೆಂಬ ಕಾನೂನು ನಮ್ಮ ಸಂವಿಧಾನದಲ್ಲಿ ಇಲ್ಲ. ಇದು ವಿವೇಕ- ವಿವೇಚನೆಯಿಲ್ಲದೆ ರಚನೆಯಾದ ಕಾನೂನು. ಹಿಂದೂ ಮುಸ್ಲಿಂನನ್ನು, ಮುಸ್ಲಿಂ ಹಿಂದೂವನ್ನು ಮಧುವೆಯಾಗುವಂತಿಲ್ಲ ಎಂಬ ನಿಯಮ ರೂಪಿಸುವುದು ತಪ್ಪು ಎಂದು ತಿಳಿಸಿದರು.