ಗ್ರಾ.ಪಂ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತೇವೆ: ಪ್ರಜ್ವಲ್ ರೇವಣ್ಣ
ಹಾಸನ: ಚುನಾವಣೆ ಎಂದರೆ ಏನು ಎಂದು ಮುಂದಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತೋರಿಸುತ್ತೇನೆ ಎಂದು ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಸವಾಲು ಹಾಕಿದ್ದಾರೆ.
ಉಪ ಚುನಾವಣೆ ಸಂಬಂಧಿಸಿದಂತೆ ಮಂತ್ರಕ್ಕೆ ಮಾವಿನಕಾಯಿ ಉದುರೊಲ್ಲ ಎಂಬ ಹಾಸನ ಶಾಸಕ ಪ್ರೀತಮ್ ಗೌಡ ಹೇಳಿಕೆಗೆ ತಿರುಗೇಟು ನೀಡಿರುವ ಅವರು ಶಿರಾ ಚುನಾವಣೆಯಲ್ಲಿ ಮಾವಿನಕಾಯಿ ಉದುರಿಸಲು ಹೋಗಿದ್ದ ಎಂದು ನಾನು ಎಂದೂ ಹೇಳಿಲ್ಲ, ಶಿರಾದಲ್ಲಿ ಬಿಜೆಪಿಯವರು ಹಣ ಹಂಚಿ ಮತ ಹಾಕಿಸಿಕೊಂಡಿದ್ದಾರೆ. ಇದೀಗ ಗ್ರಾಮ ಪಂಚಾಯತಿ ಚುನಾವಣೆ ಬಂದಿದ್ದು ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಂದ ತಕ್ಕ ಉತ್ತರ ನೀಡಲಾಗುವುದು ಎಂದು ಹೇಳಿದ್ದಾರೆ.ನನ್ನ ತಾತ ದೇವೇಗೌಡರ ಹೆಸರು ಹೇಳಿಕೊಂಡೆ ನಾನು ಲೋಕಸಭಾ ಸದಸ್ಯನಾಗಿದ್ದು ಎಂದು ಗಟ್ಟಿ ಧ್ವನಿಯಲ್ಲಿ ಹೇಳುತ್ತೆನೆ.
ಅವರ ಹೆಸರು ಸಿದ್ಧಾಂತವನ್ನು ಇಟ್ಟುಕೊಂಡು ನಾವೆಲ್ಲ ರಾಜಕಾರಣ ಮಾಡುತ್ತಿದ್ದೇವೆ ಎಂದರು. ಇದೇ ವೇಳೆ ಮತ್ತೊಮ್ಮೆ ವಿಧಾನಸೌಧದಲ್ಲಿ ಜೆಡಿಎಸ್ ಧ್ವಜ ಹಾರಿಸಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.
ನಾವು ತಂದಿರುವ ಅನುದಾನಕ್ಕೆ ಶಾಸಕ ಪ್ರೀತಮ್ ಗೌಡ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಎಂಪಿ ಅನುದಾನದಲ್ಲಿ ಎಂಪಿ ಅವರ ಸಹಿ ಇಲ್ಲದೆ ರಸ್ತೆ ಮಂಜೂರಾತಿ ಆಗಲ್ಲ ಎಂಬುದು ಅವರಿಗೆ ಗೊತ್ತಿಲ್ಲ. ಅವರು ತಂದ ಅನುದಾನವನ್ನು ಬಳಸಿ ನಡೆಯುವ ಕಾಮಗಾರಿಗೆ ನಾನೇನು ಹೋಗಿ ಪೂಜೆ ಮಾಡಿಲ್ಲ ಎಂದು ಟೀಕಿಸಿದರು.ಹಾಸನ ತಾಲೂಕಿಗೆ ಹೊಸದಾಗಿ ಶಾಸಕರಾಗಿರುವ ಅವರಿಗೆ ಸ್ವಲ್ಪ ತಿಳುವಳಿಕೆ ಕಡಿಮೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವರು ತಕ್ಕ ಪಾಠ ಕಲಿಯಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.