ಪೋಷಕರೇ ಎಚ್ಚರ: ಮಕ್ಕಳಿಗೆ ಕಂಟಕವಾಗುತ್ತಿದೆ ಕೊರೊನಾ!
ಕೊರೋನಾ ಸೋಂಕು ಇನ್ನಿಲ್ಲದಂತೆ ಎಲ್ಲರನ್ನೂ ಕಾಡುತ್ತಿದೆ. ಆದರೆ ಇದೀಗ ಈ ಮಹಾಮಾರಿಯ ಕುರಿತಾಗಿ ಆಘಾತಕಾರಿ ಸುದ್ಧಿಯೊಂದು ಹೊರ ಬಿದ್ದಿದ್ದು, ಇದು ಮಕ್ಕಳಿಗೆ ಹೆಚ್ಚು ಅಪಾಯ ತಂದೊಡ್ಡಬಲ್ಲದು ಎಂದು ವೈದ್ಯರು ಕಳವಳ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಎಚ್ಚರಿಕೆಯನ್ನು ನೀಡಿರುವ ವೈದ್ಯರು, ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದು, ಕೋವಿಡ್‌ನಿಂದ ಮಗು ಗುಣಮುಖವಾಗಿದೆ ಎಂದು ನಿರ್ಲಕ್ಷ್ಯ ವಹಿಸಬೇಡಿ.
ಮಕ್ಕಳಲ್ಲಿ ಜ್ವರ ಇನ್ನಿತರ ಯಾವುದೇ ಅನಾರೋಗ್ಯದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ. ಕೊರೋನಾದಿಂದ ಗುಣ ಮುಖವಾದ ಬಳಿಕ ಮಕ್ಕಳು ವಿಚಿತ್ರ ವಿಭಿನ್ನ ಕಾಯಿಲೆಗೆ ಒಳಗಾಗುತ್ತಿದ್ದು, ಈ ಕುರಿತಂತೆ ಈಗಾಗಲೆ ಧಾರವಾಡದಲ್ಲಿ 20 ವಿಶೇಷ ಕಾಯಿಲೆ ಪ್ರಕರಣಗಳು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
19 ವರ್ಷದ ಒಳಗಿನವರು ಈ ಕಾಯಿಲೆಗೆ ಒಳಗಾಗುತ್ತಿದ್ದು, ನಿರ್ಲಕ್ಷ್ಯ ತೋರಿದರೆ ಮಕ್ಕಳಿಗೆ ಅಪಾಯ ಖಂಡಿತಾ ಎನ್ನುತ್ತಿದ್ದಾರೆ ತಜ್ಞ ವೈದ್ಯರು. ಈ ವಿಶೇಷ ಕಾಯಿಲೆ ಚರ್ಮದ ಮೇಲೆ ಕೆಂಪು ಚುಕ್ಕೆ, ಕಣ್ಣು ಕೆಂಪಗಾಗುವುದು, ಜ್ವರ, ವಾಂತಿ ಲಕ್ಷಣಗಳನ್ನು ಹೊಂದಿದ್ದು, ಕೊರೋನಾ ದಿಂದ ಮಕ್ಕಳ ಮೇಲೆ ಸೈಡ್‌ಇಫೆಕ್ಟ್ ಆಗಬಹುದೇ ಎಂಬ ಭೀತಿ ಜನರಲ್ಲಿ ಮನೆ ಮಾಡಿದೆ. ಈಗಾಗಲೇ ರಾಜ್ಯದಲ್ಲಿ 82013 ಮಕ್ಕಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, 19 ವರ್ಷದೊಳಗಿನ 67 ಮಕ್ಕಳು ಸೋಂಕಿಗೆ ಬಲಿಯಾಗಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾದ ಮಕ್ಕಳಲ್ಲಿ 2-4 ವಾರಗಳಲ್ಲಿ ಬೇರೆ ಬೇರೆ ಕಾಯಿಲೆಗಳು ಪೋಷಕರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ.