ಶ್ರೀಕೃಷ್ಣಾಪುರ ಮಠದ 2022-23 ಪರ್ಯಾಯೋತ್ಸವಕ್ಕೆ ಬಾಳೆ ಮುಹೂರ್ತ ಸಂಪನ್ನ
ಉಡುಪಿ:(ಉಡುಪಿ ಟೈಮ್ಸ್ ವರದಿ) ಮುಂಬರುವ 2022-23 ವೈಭವದ ಪರ್ಯಾಯಕ್ಕೆ ಶ್ರೀ ಕೃಷ್ಣ ಮಠದಲ್ಲಿ ಸಿದ್ದತೆಗಳು ನಡೆಯುತ್ತಿದೆ. ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಪರ್ಯಾಯ ಪೂರ್ವಭಾವಿಯಾಗಿ ಇಂದು ಕೃಷ್ಣಾಪುರ ಮಠದಲ್ಲಿ ಬಾಳೆ ಮೂರ್ತ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಪರ್ಯಾಯಕ್ಕೆ ಬಾಳೆಗಿಡ, ಬಾಳೆ ಎಲೆ, ಬಾಳೆಗೊನೆ, ಕಬ್ಬು ಮತ್ತು ತುಳಸಿ ಗಿಡಗಳು ಅತ್ಯಗತ್ಯವಾಗಿ ಬೇಕಾಗಿರುವುದರಿಂದ ಇದರ ಅಗತ್ಯತೆಯನ್ನು ಪೂರೈಸಲು ಇಂದು ಬಾಳೆ ಮುಹೂರ್ತ ನೆರವೇರಿಸಲಾಯಿತು. ಈ ಭಾರಿಯ ಪರ್ಯಾದ ಮೂಲಕ ಶ್ರೀ ವಿದ್ಯಾಸಾಗರತೀರ್ಥರು 4ನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡುತ್ತಿದ್ದು, ಈ ಹಿಂದೆ 1974-75, 1990-91, 2006-07ರಲ್ಲಿ 3 ಬಾರಿ ಪರ್ಯಾಯ ಪೂಜೆ ನಿರ್ವಹಿಸಿದ್ದಾರೆ.
ಈ ಸಂದರ್ಭ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್, ಪೇಜಾವರ ಮಠದ ದಿವಾನ ರಘುರಾಮ ಆಚಾರ್ಯ, ಕಾಣಿಯೂರು ಮಠದ ದಿವಾನ ರಘುಪತಿ ಆಚಾರ್ಯ, ಯಶ್ಪಾಲ್ ಸುವರ್ಣ, ರಾಘವೇಂದ್ರ ಆಚಾರ್ಯ, ಪ್ರದೀಪ್ ಕುಮಾರ್ ಕಲ್ಕೂರ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.