ರೈತರ ಪ್ರತಿಭಟನೆ 4ನೇ ದಿನಕ್ಕೆ: ಕೇಂದ್ರ-ರೈತರ ನಡುವೆ ತೀವ್ರಗೊಳ್ಳುತ್ತಿರುವ ಬಿಕ್ಕಟ್ಟು

ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಕೃಷಿ ಸಂಬಂಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ದೆಹಲಿ ಗಡಿಯಲ್ಲಿನ ರಸ್ತೆಗಳಲ್ಲಿ ಬೀಡು ಬಿಟ್ಟಿರುವ ರೈತರ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಷರತ್ತಿನ ಮಾತುಕತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ್ದ ಆಹ್ವಾನವನ್ನು ಹರಿಯಾಣ ಹಾಗೂ ಪಂಜಾಬ್ ರೈತರು ತಿರಸ್ಕರಿಸಿದ್ದು, ಇದರಿಂದಾಗಿ ಕೇಂದ್ರ ಹಾಗೂ ರೈತರ ನಡುವಿನ ಬಿಕ್ಕಟ್ಟು ತೀವ್ರಗೊಂಡಿದೆ. 

ಶನಿವಾರವಷ್ಟೇ ಹೇಳಿಕೆ ನೀಡಿದ್ದ ಅಮಿತ್ ಶಾ ಅವರು ದೆಹಲಿ ಗಡಿಯ ಸಿಂಘು ಹಾಗೂ ಟಿಕ್ರಿ ಹೆದ್ದಾರಿಗಳ ಮೇಲೆ ಬೀಡು ಬಿಟ್ಟಿರುವ ರೈತರು, ಸರ್ಕಾರವು ಪ್ರತಿಭಟನೆಗ ಅವಕಾಶ ಕಲ್ಪಿಸಿರುವ ಬುರಾರಿ ಮೈದಾನಕ್ಕೆ ಸ್ಥಳಾಂತರಗೊಳ್ಳಬೇಕು. ಬಳಿಕ ಡಿಸೆಂಬರ್ 3ರಂದು ಕೇಂದ್ರ ಸರ್ಕಾರವು ರೈತರೊಂದಿಗೆ ಮಾತುಕತೆ ನಡೆಸಲು ಸಿದ್ಧವಿದೆ ಎಂದು ಹೇಳಿದ್ದರು. 

ಈ ಮನವಿಯನ್ನು ತಿರಸ್ಕರಿಸಿರುವ ವಿವಿಧ 30 ರೈತ ಸಂಘಟನೆಗಳ ಮುಖಂಡರು, ಸರ್ಕಾರದ ಯಾವುದೇ ಷರತ್ತನ್ನೂ ನಾವು ಒಪ್ಪಿಕೊಳ್ಳುವುದಿಲ್ಲ. ಬೇಷರತ್ತಾಗಿ ಮಾತುಕತೆಗೆ ಕರೆದರೆ ಮಾತ್ರ ಹೋಗುತ್ತೇವೆ ಎಂದು ಹೇಳಿದ್ದರು. 

ರೈತ ಕಾಯ್ದೆ ರದ್ದಾಗಬೇಕೆಂಬ ಬೇಡಿಕೆ ಇಡೇರದ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲ. ನಾವು ಹೆದ್ದಾರಿ ಬಿಟ್ಟು ಬುರಾರಿ ಮೈದಾನಕ್ಕೆ ಹೋಗುವುದಿಲ್ಲ. ಅದೊಂದು ರೀತಿ ತೆರೆದ ಜೈಲಿನ ಥರ ಇದೆ ಎಂದು ಗುಡುಗಿದ್ದರು. ಈ ನಡುವೆ ಕೆಲವು ರೈತರು ಬುರಾರಿ ಮೈದಾನಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಕೃಷಿ ಕಾಯ್ದೆಗಳನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಅಮಿತ್ ಶಾ ಅವರ ಆಹ್ವಾನಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. 

ರಾತ್ರೋರಾತ್ರಿ ಸಭೆ ಸೇರಿದ ಬಿಜೆಪಿ ನಾಯಕರು
ಈ ನಡುವೆ ರೈತರು ಪಟ್ಟುಬಿಡದೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿರುವ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಸಭೆ ಸೇರಿದ್ದು, ಮಾತುಕತೆ ನಡೆಸಿದ್ದಾರೆಂದು ವರದಿಗಳಿಂ ತಿಳಿದುಬಂದಿದೆ. 

ಕಳೆದ ರಾತ್ರಿ ದೆಹಲಿಯಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರ ನಿವಾಸದಲ್ಲಿ ಸಭೆ ನಡೆದಿದ್ದು, ಸಬೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು ಎಂದು ವರದಿಗಳು ತಿಳಿಸಿವೆ. 

Leave a Reply

Your email address will not be published. Required fields are marked *

error: Content is protected !!