ಬೆಳಗಾವಿ ಟಿಕೆಟ್ ಮುಸ್ಲಿಮರಿಗೆ ಕೊಡಲ್ಲ: ಕೆ.ಎಸ್.ಈಶ್ವರಪ್ಪ
ಬೆಳಗಾವಿ: ಬೆಳಗಾವಿ ಹಿಂದುತ್ವದ ಕೇಂದ್ರ ಹಾಗಾಗಿ ಬೆಳಗಾವಿ ಲೋಕಸಭೆ ಟಿಕೆಟ್ ನ್ನು ನಾವು ಮುಸ್ಲಿಮರಿಗಂತೂ ನೀಡಲ್ಲ, ಹಿಂದೂಗಳಿಗೇ ನೀಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಇನ್ನು ಬೆಳಗಾವಿ ಲೋಕಸಭೆ ಟಿಕೆಟ್ ಕುರುಬ ಸಮುದಾಯಕ್ಕೆ ಕೊಡಬೇಕೆನ್ನುವ ಆಗ್ರಹದ ಬಗ್ಗೆ ಮಾತನಾಡಿದ ಸಚಿವರು “ಬೆಳಗಾವಿಯಲ್ಲಿ ಕುರುಬ, ಒಕ್ಕಲಿಗ, ಲಿಂಗಾಯತ ಅಥವಾ ಬ್ರಾಹ್ಮಣ ಎಂಬ ಪ್ರಶ್ನೆ ಬರುವುದಿಲ್ಲ. ಕಾಂಗ್ರೆಸ್ ನಲ್ಲಿ ಕುರುಬರಿಗೆ ಟಿಕೆಟ್ ನೀಡಿದ್ದರು. ಅವರಲ್ಲಿ ಎಷ್ಟು ಮಂದಿ ಗೆದ್ದಿದ್ದಾರೆ? ಠೇವಣಿ ಕಳೆದುಕೊಳ್ಳಲು ಟಿಕೆಟ್ ಕೊಡಬೇಕೆ?” ಎಂದು ಪ್ರಶ್ನಿಸಿದ್ದಾರೆ.
“ನಾವು ಬೆಳಗಾವಿಯಲ್ಲಿ ಟಿಕೆಟ್ ನ್ನು ಕುರುಬರಿಗೋ, ಲಿಂಗಾಯತರಿಗೋ, ಒಕ್ಕಲಿಗರಿಗೀ, ಬ್ರಾಹ್ಮಣರಿಗೋ ಕೊಡ್ತೇವೆ. ಆದರೆ ಮುಸ್ಲಿಮರಿಗೆ ಕೊಡಲ್ಲ. ಬೆಳಗಾವಿ ಹಿಂದುತ್ವದ ಕೇಂದ್ರ ಹಾಗಾಗಿ ಇಲ್ಲಿ ಯಾವ ಕಾರಣಕ್ಕೂ ಮುಸ್ಲಿಮರಿಗೆ ಟಿಕೆಟ್ ಕೊಡುವುದಿಲ್ಲ” ಸಚಿವ ಈಶ್ವರಪ್ಪ ಹೇಳಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಈಶ್ವರಪ್ಪ “ಸಿದ್ದರಾಮಯ್ಯ ವರ್ಚಸ್ಸು ಎಲ್ಲಿದೆ? ಆರ್.ಆರ್. ನಗರ, ಶಿರಾದಲ್ಲಿ ಏನು ನಡೆಯಿತು? ಈಗಲೂ, ಮುಂದೆಯೂ ಸಿದ್ದರಾಮಯ್ಯ ಸಿಎಂ ಅಂತ ಅವರೇ ಹೇಳಿದ್ದರು. ಆದರೆ ಅವರೀಗ ಎಲ್ಲಿದ್ದಾರೆ? ರಾಜಕಾರಣದಲ್ಲಿ ನಾನು ಸಕ್ರಿಯವಾಗಿದ್ದೇನೆ ಎಂದು ತೋರಿಸಲು ಏನೇನೋ ಹೇಳಿಕೆ ನೀಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.