ಉಗ್ರ ಸಂಘಟನೆ ಪರ ಗೋಡೆ ಬರಹ, ಆರೋಪಿಗಳನ್ನು ಬಂಧಿಸಿ ದೇಶದಿಂದ ಹೊರಗಟ್ಟಿ: ಐವನ್ ಡಿಸೋಜಾ
ಮಂಗಳೂರು: ಬಿಜೈ ಸಮೀಪದ ಅಪಾರ್ಟ್ಮೆಂಟ್‌ವೊ0ದರ ಗೋಡೆ ಮೇಲೆ ಉಗ್ರ ಸಂಘಟನೆಯ ಪರ ಬರಹವನ್ನು ಖಂಡಿಸಿ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಲಾಯಿತು. ಯುವ ಇಂಟಕ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ, ಪ್ರತಿಭಟನಾಕಾರರು ಜಿಲ್ಲೆಯಲ್ಲಿ ಶಾಂತಿ ಕದಡುವ ದುಷ್ಕರ್ಮಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಈ ವೇಳೆ ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಮಂಗಳೂರು ಬಿಜೈ ಸಮೀಪದ ಅಪಾರ್ಟ್ಮೆಂಟ್‌ವೊ0ದರ ಗೋಡೆ ಮೇಲೆ ಉಗ್ರ ಸಂಘಟನೆಯ ಪರ ಬರಹ ಬರೆದಿರುವ ದುಷ್ಕರ್ಮಿಗಳನ್ನು ತಕ್ಷಣ ಪತ್ತೆ ಹಚ್ಚಿ, ದೇಶದ್ರೋಹದ ಪ್ರಕರಣ ದಾಖಲಿಸಿ ದೇಶದಿಂದ ಹೊರಗಟ್ಟಬೇಕು.
ಇದು ದೇಶದ ಭದ್ರತೆಗೆ ಸವಾಲಿನ ಪ್ರಕರಣವಾಗಿದ್ದು, ಈ ರೀತಿ ಜಿಲ್ಲೆಯಲ್ಲಿ ಶಾಂತಿ ಕದಡುತ್ತಿರುವ ದುಷ್ಟಶಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕಾಗಿದೆ. ನಗರದ ಹೃದಯ ಭಾಗದಲ್ಲಿ ಇಷ್ಟೊಂದು ಧೈರ್ಯದಲ್ಲಿ ಈ ಕೃತ್ಯ ನಡೆದಿರುವುದು ಜಿಲ್ಲೆಯ ಪೊಲೀಸ್ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಆದ್ದರಿಂದ ಪೊಲೀಸರು ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ನಗರದಲ್ಲಿ ಮೆರವಣಿಗೆ ನಡೆಸಬೇಕು.
ಅಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಪ್ರತಿಭಟನೆಯಲ್ಲಿ ನ್ಯಾಯವಾದಿ ದಿನಕರ ಶೆಟ್ಟಿ, ಇಂಟಕ್ ಮುಖಂಡರಾದ ಮನೋಹರ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಸುನೀಲ್ ಶೆಟ್ಟಿ, ಹರೀಶ್, ಪುನೀತ್ ಮೊದಲಾದವರು ಭಾಗವಹಿಸಿದ್ದರು.