ಮಲ್ಪೆಯ ಬೋಟು ಮಹಾರಾಷ್ಟ್ರ ಸಮೀಪ ಮುಳುಗಡೆ: ಲಕ್ಷಾಂತರ ರೂ. ನಷ್ಟ, 7 ಮೀನುಗಾರರ ರಕ್ಷಣೆ
ಉಡುಪಿ: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟೊಂದು ಗೋವಾ ಮಹಾರಾಷ್ಟ್ರದ ಸಮೀಪದ ಸಮುದ್ರದಲ್ಲಿ ಮುಳುಗಡೆಯಾದ ಘಟನೆ ನಿನ್ನೆ ನಡೆದಿದೆ. ಘಟನೆ ವೇಳೆ ಬೋಟ್‌ನಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಮಲ್ಪೆಯ ಹನುಮಾನ್ ನಗರದ ತಾರಾನಾಥ ಕುಂದರ್ ಎಂಬವರ `ಮಥುರಾ’ ಹೆಸರಿನ ಆಳಸಮುದ್ರ ಮೀನುಗಾರಿಕಾ ಬೋಟು ನ.17ರಂದು ಮಲ್ಪೆ ಬಂದರಿನಿoದ ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ ಗೋವಾ-ಮಹಾರಾಷ್ಟ್ರ ಮಧ್ಯೆ ಸುಮಾರು 22 ಮಾರು ಆಳ ದೂರ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಬೋಟಿನ ತಳಭಾಗಕ್ಕೆ ವಸ್ತುವೊಂದು ಢಿಕ್ಕಿ ಹೊಡೆಯಿತ್ತೆನ್ನಲಾಗಿದ್ದು, ಇದರಿಂದ ಬೋಟಿನ ಹಲ್ ಒಡೆದು ಸ್ಟೋರೇಜ್ ಮೂಲಕ ಬೋಟಿನ ಒಳಗೆ ಸಮುದ್ರದ ನೀರು ನುಗ್ಗಿದೆ. ಅಪಾಯವನ್ನರಿತ ಬೋಟ್‌ನಲ್ಲಿದ್ದ ಮೀನುಗಾರರು ಸಮೀಪದಲ್ಲಿದ್ದ `ಮಾಹೂರ್’ ಬೋಟಿನವರಿಗೆ ಮಾಹಿತಿ ನೀಡಿದರು. ಕೂಡಲೇ ಆಗಮಿಸಿದ ಮಾಹೂರ್ ಬೋಟಿನವರು, ಮುಳುಗಡೆಯಾಗುತ್ತಿದ್ದ ಬೋಟಿನಿಂದ 7 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ. ಇದೇ ವೇಳೆ ಬೋಟನ್ನು ಗೋವಾ ಬಂದರಿಗೆ ಎಳೆದು ತರುವ ಪ್ರಯತ್ನ ಮಾಡಿದರಾದರೂ ಬೋಟಿನೊಳಗೆ ಸಂಪೂರ್ಣ ನೀರು ನುಗ್ಗಿದ್ದರಿಂದ ತಡರಾತ್ರಿ ವೇಳೆ ಬೋಟು ಸಮುದ್ರ ಮಧ್ಯೆ ಮುಳುಗಡೆಯಾಗಿದೆ. ರಕ್ಷಿಸಲ್ಪಟ್ಟ ಮೀನುಗರರನ್ನು ಮಹೂರ್ ಬೋಟು ಮೂಲಕ ಮಲ್ಪೆ ಬಂದರಿಗೆ ಕರೆತರಲಾಗಿದೆ. ಮುಳುಗಡೆಯಾದ ಬೋಟಿನಲ್ಲಿದ್ದ ಬಲೆ, ಡಿಸೇಲ್, ಮೀನು ಸೇರಿದಂತೆ ಇತರ ವಸ್ತುಗಳು ಸಮುದ್ರ ಪಾಲಾಗಿದ್ದು, ಸುಮಾರು 65 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. |