ಉಡುಪಿ – ದ.ಕ.ಜಿಲ್ಲೆಗಳ ಡಿಸಿಸಿ ಬ್ಯಾಂಕ್ ವಿಭಜನೆಗೆ ವಿರೋಧ: ಎಂ.ಎನ್.ರಾಜೇಂದ್ರ ಕುಮಾರ್
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (ಎಸ್‍ಸಿಡಿಸಿಸಿ) ಬ್ಯಾಂಕ್ 2019-20ನೇ ಸಾಲಿನಲ್ಲಿ ₹ 30.83 ಕೋಟಿ ಲಾಭ ಗಳಿಸಿದ್ದು, ತನ್ನ ಸದಸ್ಯ ಸಂಘಗಳಿಗೆ ಶೇ 8 ಡಿವಿಡೆಂಟ್ ಘೋಷಿಸಿದೆ.
ಬ್ಯಾಂಕಿನ ಸಭಾಭವನದಲ್ಲಿ ಶುಕ್ರವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಘೋಷಣೆ ಮಾಡಿದರು. ಹೊಸ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಳವಡಿಸಿ, ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ನೀಡಲಾಗುತ್ತಿದೆ. ಇಂಟರ್ನೆಟ್, ಕೋರ್ ಬ್ಯಾಂಕಿಂಗ್ ಸೇವೆಗಳು ಬ್ಯಾಂಕಿನ 105 ಶಾಖೆಗಳಲ್ಲೂ ಇವೆ. ಮೊಬೈಲ್ ಆ್ಯಪ್, ಟ್ಯಾಬ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇಂಟರ್ ಬ್ಯಾಂಕಿಂಗ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಹಾಗೂ ಇಂಟರ್ ಬ್ಯಾಂಕಿಂಗ್ ಸೇವೆಯನ್ನು ರೂಪಿಸಲಾಗುವುದು’ ಎಂದರು. ಬ್ಯಾಂಕ್ 105 ಶಾಖೆಗಳ ಮೂಲಕ ಒಟ್ಟು ₹4,205.97 ಕೋಟಿ ಠೇವಣಿ ಸಂಗ್ರಹಿಸಿದ್ದು, ಅತಿ ಹೆಚ್ಚು ಠೇವಣಿ ಸಂಗ್ರಹಿಸಿದ ರಾಜ್ಯದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದರು.
ಶೇಕಡಾ ನೂರು ವಸೂಲಾತಿ ಮಾಡಿದ 5 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಲೆಕ್ಕ ಪರಿಶೋಧನೆಯಲ್ಲಿ ಅತ್ಯುತ್ತಮ ಕಾರ್ಯ ಮಾಡಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 2019-20ನೇ ಸಾಲಿನ ಜಿಲ್ಲಾ ಬ್ಯಾಂಕಿನ ಪ್ರೋತ್ಸಾಹಕ ಪ್ರಶಸ್ತಿಯನ್ನು 76 ಸಹಕಾರಿ ಸಂಘಗಳಿಗೆ ನೀಡಲಾಯಿತು. ಅಲ್ಲದೇ 6 ಪತ್ತಿನ ಸಹಕಾರಿ ಬ್ಯಾಂಕ್‍ಗಳು, 3 ಪಟ್ಟಣ ಸಹಕಾರಿ ಬ್ಯಾಂಕುಗಳು, 6 ಹಾಲು ಉತ್ಪಾದಕರ ಸಹಕಾರಿ ಸಂಘಗಳು, 6 ಮಹಿಳಾ ಹಾಲು ಉತ್ಪಾದಕರ ಸಂಘಗಳು, 9 ವಿವಿಧೋದ್ದೇಶ ಸಹಕಾರ ಸಂಘಗಳು ವಿವಿಧ ಪ್ರಶಸ್ತಿ ಪಡೆದುಕೊಂಡವು.
3 ರೈತ ಸೇವಾ ಕೂಟದ ಮುಖ್ಯ ಸಂಯೋಜಕರಿಗೆ ಪ್ರಶಸ್ತಿ ನೀಡಲಾಯಿತು. ಎಸ್‍ಸಿಡಿಸಿಸಿ ಬ್ಯಾಂಕಿನ 5 ಸಿಬ್ಬಂದಿ ಹಾಗೂ ಪ್ರಾಥಮಿಕ ಸಹಕಾರಿ ಸಂಘಗಳ 10 ಮಂದಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಿವೃತ್ತಿ ಹೊಂದಿದ್ದು ಬ್ಯಾಂಕಿನಿಂದ ತಲಾ ₹ 50 ಸಾವಿರ ನೀಡಿ ಗೌರವಿಸಲಾಯಿತು. ಗುರಿ ಮೀರಿ ಸಾಧನೆಗೈದ 6 ಶಾಖಾ ವ್ಯವಸ್ಥಾಪಕರುಗಳಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಬಿ. ನಿರಂಜನ್, ಟಿ.ಜಿ. ರಾಜಾರಾಮ್ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ದೇವಿ ಪ್ರಸಾದ್ ಶೆಟ್ಟಿ ಬೆಳಪು, ಎಂ. ವಾದಿರಾಜ ಶೆಟ್ಟಿ, ಕೆ.ಎಸ್. ದೇವರಾಜ್, ರಾಜು ಪೂಜಾರಿ, ಶಶಿಕುಮಾರ್ ರೈ ಬಿ, ಎಸ್.ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಹರೀಶ್ಚಂದ್ರ, ಎಂ.ಮಹೇಶ್ ಹೆಗ್ಡೆ, ಕೆ.ಜೈರಾಜ್ ಬಿ. ರೈ, ಬಿ.ಅಶೋಕ್ ಕುಮಾರ್ ಶೆಟ್ಟಿ, ಸದಾಶಿವ ಉಳ್ಳಾಲ್, ಬಿ. ರಾಜೇಶ್ ರಾವ್, ಸಹಕಾರಿ ಸಂಘಗಳ ಉಪನಿಬಂಧಕರುಗಳಾದ ಪ್ರವೀಣ್ ಬಿ. ನಾಯಕ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ., ಮಹಾ ಪ್ರಬಂಧಕರಾದ ಗೋಪಿನಾಥ್ ಭಟ್ ಇದ್ದರು.
ಬ್ಯಾಂಕ್ ವಿಭಜನೆಗೆ ವಿರೋಧ: ‘ಎಸ್‍ಸಿಡಿಸಿಸಿ ಬ್ಯಾಂಕ್ ವಿಭಜನೆ ಬೇಡ’ ಎಂಬ ನಿಲುವನ್ನು ಮಹಾಸಭೆಯಲ್ಲಿ ಸರ್ವಾನುಮತದಿಂದ ಕೈಗೊಳ್ಳಲಾಯಿತು. ‘ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್ ಅನ್ನು ವಿಭಜನೆ ಮಾಡಿ ಪ್ರತ್ಯೇಕಗೊಳಿಸುವುದಕ್ಕೆ ಸಹಕಾರಿ ಸಂಸ್ಥೆಗಳ ಬೆಂಬಲವಿಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಸಂಸ್ಥೆಗಳು ಸದೃಢವಾಗಿ ಕಾರ್ಯನಿರ್ವಹಿಸುತ್ತಿವೆ. ದೇಶದ ಆರ್ಥಿಕ ವ್ಯವಸ್ಥೆಗೆ ಅನುಗುಣವಾಗಿ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳನ್ನು ವಿಲೀನಗೊಳಿಸುತ್ತಿರುವ ಪ್ರಕ್ರಿಯೆಗೆ ಪ್ರಧಾನಿ ಚಾಲನೆ ನೀಡಿರುತ್ತಾರೆ. ಅದಕ್ಕೆ ಪೂರಕವಾಗಿ ಡಿಸಿಸಿ ಬ್ಯಾಂಕ್ ವಿಭಜನೆ ಮಾಡುವುದು ಸೂಕ್ತವಲ್ಲ’ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.