ಲಿಂಗಾಯತರಿಗೆ ಒಬಿಸಿ ಮೀಸಲಾತಿಗೆ ಬ್ರೇಕ್, ಸಂಪುಟ ವಿಸ್ತರಣೆಗೆ ಹೈಕಮಾಂಡ್ ‘ಗ್ರೀನ್ ಸಿಗ್ನಲ್’!
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಇದೀಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರತ್ತ ನೆಟ್ಟಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಡಿಸೆಂಬರ್ ಎರಡನೇ ವಾರದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಲು ಹೈಕಮಾಂಡ್ ಸೂಚಿಸಿದೆ ಎಂಬ ಊಹಾಪೋಹದ ಸುದ್ದಿಗಳು ಬಿಜೆಪಿಯಲ್ಲಿ ಹರಿದಾಡುತ್ತಿದ್ದು, ಅದಕ್ಕೆ ಪೂರಕ ಎಂಬಂತೆ ಯಡಿಯೂರಪ್ಪ ಅವರೂ ಒಂದಾದ ಮೇಲೊಂದರಂತೆ ದಿಢೀರ್ ನಿರ್ಧಾರಗಳನ್ನು ಕೈಗೊಂಡು ರಾಜಕೀಯ ದಾಳ ಉರುಳಿಸುತ್ತಿದ್ದಾರೆ. ಇದು ರಾಜಕೀಯವಾಗಿ ಭಾರೀ ಕುತೂಹಲ ಕೆರಳಿಸಿದೆ.
ನಿಗಮ-ಮಂಡಳಿಗಳಿಗೆ ನೇಮಕ, ಸಂಪನ್ಮೂಲ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಸೂಚನೆ, ಸಾಲು ಸಾಲು ನಿಗಮಗಳ ರಚನೆ ಮಾಡುವ ಮೂಲಕ ಯಡಿಯೂರಪ್ಪ ವರಿಷ್ಠರಿಗೆ ಸೆಡ್ಡು ಹೊಡೆಯುವ ಪ್ರಯತ್ನ ಮಾಡಿದ್ದರು. ಲಿಂಗಾಯಿತ ಮತ್ತು ವೀರಶೈವ ಸಮುದಾಯಕ್ಕೆ ಮೀಸಲಾತಿ ಪ್ರಕಟಿಸಲು ಮುಂದಾಗಿದ್ದರು.
ಈ ಬೆಳವಣಿಗೆ ನಡುವೆಯೇ ದಿಢೀರ್ ಎಂದು ಹೈಕಮಾಂಡ್‌ನಿಂದ ದೂರವಾಣಿ ಕರೆಯೊಂದು ಬಂದು ಯಡಿಯೂರಪ್ಪ ಅವರ ವೇಗಕ್ಕೆ ತಡೆ ನೀಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರಿಗೆ ಇಂದು ಬೆಳಗ್ಗೆ ಕರೆ ಮಾಡಿ ರಾಜಕೀಯ ತೀರ್ಮಾನಗಳಿಗೆ ನಿಯಂತ್ರಣ ಹೇರಿಕೊಳ್ಳುವಂತೆ ಸೂಚನೆ ನೀಡಿದರು.
ಹೀಗಾಗಿ ಸಚಿವ ಸಂಪುಟ ಸಭೆಯ ನಂತರ ಯಡಿಯೂರಪ್ಪ ನಡೆಸಲು ಉದ್ದೇಶಿಸಿದ್ದ ಮಹತ್ವದ ತುರ್ತು ಸುದ್ದಿಗೋಷ್ಠಿ ರದ್ದು ಮಾಡಿದ್ದಾರೆ. ಜೊತೆಗೆ ಸಂಪುಟ ಸಭೆಯಲ್ಲಿ ಲಿಂಗಾಯಿತ ಮತ್ತು ವೀರಶೈವ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಮಹತ್ವದ ನಿರ್ಣಯ ಕೈಗೊಳ್ಳುವುದನ್ನು ಮುಂದೂಡಿದರು.
ವಿಧಾನಸೌಧದಲ್ಲಿ ನಡೆದ ಮಹತ್ವದ ಸಂಪುಟ ಸಭೆಗೂ ಮುನ್ನ ಮಾತನಾಡಿದ್ದ ಸಿಎಂ ಯಡಿಯೂರಪ್ಪ ಅವರು, ಈಗಷ್ಟೇ ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಇನ್ನು ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಪಟ್ಟಿ ಕಳುಹಿಸಿಕೊಡುವುದಾಗಿ ಅವರು ಹೇಳಿದ್ದಾರೆ. ಸಚಿವ ಸಂಪುಟದ ವಿಷಯ ಪರಿಹಾರ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೀರಶೈವ ಲಿಂಗಾಯಿತ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಕುರಿತು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ತೀರ್ಮಾನ ಮಾಡುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು. ಲಿಂಗಾಯಿತರನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಿದ್ದೆವು. ಆದರೆ, ದೆಹಲಿಗೆ ಹೋಗಿ ಚರ್ಚಿಸಿದ ಬಳಿಕ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಯಾವುದೇ ಆತುರದ ತೀರ್ಮಾನ ಕೈಗೊಳ್ಳದಂತೆ ಸಂಪುಟ ಸಹೋದ್ಯೋಗಿಗಳು ಸಲಹೆ ಮಾಡಿದ್ದಾರೆ. ಹೀಗಾಗಿ ದೆಹಲಿಗೆ ಹೋಗಿ ಬಂದ ಬಳಿಕವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಸ್ಪಷ್ಟಪಡಿಸಿದರು.
ಸಿಎಂ ಯೂಟರ್ನ್ ಹೊಡೆದಿದ್ಯಾಕೆ?
ವೀರಶೈವ ಲಿಂಗಾಯತರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ಯಡಿಯೂರಪ್ಪ ನಿರ್ಧಾರ ಮಾಡಿದ್ದರು. ಅದರಂತೆ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡುವ ಕುರಿತು ಕ್ಯಾಬಿನೆಟ್ ಅಜೆಂಡಾದ ಕೊನೆಯ 27ನೇ ವಿಷಯವಾಗಿ ಸೇರಿಸಲಾಗುತ್ತು. ಆದರೆ ಕೊನೆ ಘಳಿಗೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಆ ವಿಷಯವನ್ನು ಸಂಪುಟದಲ್ಲಿ ಚರ್ಚೆ ಮಾಡದೇ ತಡೆಹಿಡಿಯಲಾಗಿದೆ. ಇದಕ್ಕೆ ಕಾರಣವಾಗಿದ್ದು ಅಮಿತ್ ಶಾ ಅವರ ದೂರವಾಣಿ ಕರೆ ಎನ್ನಲಾಗಿದೆ.
ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್
ಸಂಪುಟ ಸಭೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೂರವಾಣಿ ಕರೆ ಮಾಡಿ ಸಂಪುಟ ವಿಸ್ತರಣೆ ಕುರಿತು ಇನ್ನೆರಡು ದಿನಗಳಲ್ಲಿ ಪಟ್ಟಿ ಕಳುಹಿಸುತ್ತೇವೆ. ಅಲ್ಲಿಯವರೆಗೂ ಲಿಂಗಾಯತರನ್ನು ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಪ್ರಸ್ತಾವನೆ ಕಳುಹಿಸಬೇಡಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿಯೆ ಯಡಿಯೂರಪ್ಪ ಅವರು ಸಂಪುಟ ಸಭೆಯಲ್ಲಿ ಲಿಂಗಾಯತರಿಗೆ ಮೀಸಲಾತಿ ಶಿಫಾರಸು ಮಾಡುವ ವಿಷಯವನ್ನು ತಡೆಹಿಡಿದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಲಿಂಗಾಯತ ಸಮುದಾಯಕ್ಕೆ ಸೇರಿರುವ ಯಡಿಯೂರಪ್ಪ ಅವರು ಸ್ವಂತ ಸಮುದಾಯವನ್ನು ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಪ್ರಸ್ತಾವನೆ ಕಳುಹಿಸಿದರೆ ಅದನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕಿತ್ತು. ಒಪ್ಪಿಕೊಳ್ಳದಿದ್ದರೆ ಪ್ರಬಲ ಸಮುದಾಯದ ಬೆಂಬಲ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಅದರ ಬದಲು ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಕೊಡುವ ಮೂಲಕ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಸಮಾಧಾನ ಮಾಡಿದೆ ಎನ್ನಲಾಗಿದೆ.
ಹೀಗಾಗಿಯೇ ಸಿಎಂ ಯಡಿಯೂರಪ್ಪ ಅವರು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವುದು ಹಾಗೂ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸುವುದನ್ನು ಕೈಬಿಟ್ಟರು. ಒಟ್ಟಾರೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ರಾಜಕೀಯ ಜಾಣ್ಮೆಯನ್ನು ಯಡಿಯೂರಪ್ಪ ಅವರು ಮೆರೆದಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ. ಇದು ಎಲ್ಲಿಯವರೆಗೆ? ಎಂಬುದನ್ನು ಕಾಯ್ದು ನೋಡಬೇಕಿದೆ.