ಉಡುಪಿ: ಕಾಂಗ್ರೆಸ್ ಬಣ ರಾಜಕೀಯ – ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಪ್ರತಿಭಟನೆಗೆ ಸಿದ್ಧತೆ?
ಉಡುಪಿ (ಉಡುಪಿ ಟೈಮ್ಸ್ ವರದಿ) : ಲೋಕಸಭೆ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಉಡುಪಿ ಜಿಲ್ಲಾ ಕಾಂಗ್ರೆಸ್, ದಿನಕಳೆದಂತೆ ಬಣ ರಾಜಕೀಯದಲ್ಲಿ ಒದ್ದಾಡುತ್ತಿದೆ. ಹಲವು ವರ್ಷಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಉಡುಪಿ ಜಿಲ್ಲೆ, ಈಗ ಸಂಪೂರ್ಣ ಬಿಜೆಪಿ ಮಯವಾಗಿದೆ. ಪ್ರಭಾವಿ ನಾಯಕರಾದ ಆಸ್ಕರ್ ಫೆರ್ನಾಂಡಿಸ್ ಮತ್ತು ವೀರಪ್ಪ ಮೊಯಿಲಿ ಅವರನ್ನು ರಾಜ್ಯ ಮತ್ತು ಕೇಂದ್ರದ ಉನ್ನತ ಹುದ್ದೆ ನೀಡುವಲ್ಲಿ ಕಾರಣವಾಗಿದ್ದ ಉಡುಪಿ ಕಾಂಗ್ರೆಸ್ ಈಗ ನಾವಿಕನಿಲ್ಲದ ದೋಣಿಯಂತಾಗಿದೆ.
ಹಲವು ವರ್ಷ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಂ.ಎ ಗಫೂರ್ ಮತ್ತು ಮಾಜಿ ಶಾಸಕ ಗೋಪಾಲ ಪೂಜಾರಿ ಬಳಿಕ ಪೂರ್ತಿ ಅವಧಿಯ ಅಧ್ಯಕ್ಷನಿಲ್ಲದೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸೊರಗುತ್ತಿದೆ. ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರಲ್ಲಿ ಓರ್ವರಾಗಿದ್ದ ಪ್ರತಾಪ್ ಚಂದ್ರ ಶೆಟ್ಟಿ ವಿಧಾನಪರಿಷತ್ ಸಭಾಪತಿಯಾಗಿದ್ದರಿಂದ ಪ್ರಸ್ತುತ ಸನ್ನಿವೇಶದಲ್ಲಿ ಜಿಲ್ಲಾ ಕಾಂಗ್ರೆಸ್ ನ ಮುಂಚೂಣಿ ನಾಯಕರಾರು ಎಂಬ ಗೊಂದಲ ಕಾರ್ಯಕರ್ತರಲ್ಲಿದೆ.
ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅಸೌಖ್ಯ ದಲ್ಲಿರುವುದರಿಂದ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ರಾಜ್ಯ ರಾಜಕೀಯದಲ್ಲಿ ಇರುವುದರಿಂದ, ಉಡುಪಿಯ ಮಾಜಿ ಸಚಿವರಿಬ್ಬರಲ್ಲಿ ಶೀತಲಸಮರ ಏರ್ಪಟ್ಟಿದೆ. ಮಾಜಿ ಅಧ್ಯಕ್ಷ ಮತ್ತು ಮಾಜಿ ಶಾಸಕ ಗೋಪಾಲ ಪೂಜಾರಿ ಬೈಂದೂರು ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ. ಕಾರ್ಕಳದಲ್ಲಿ ಗೋಪಾಲ ಭಂಡಾರಿ ನಿಧನದ ಬಳಿಕ ಮುಂದಿನ ನಾಯಕನ್ಯಾರು ಎಂಬ ಸಮಸ್ಯೆ ಅಲ್ಲಿಯ ಕಾರ್ಯಕರ್ತರದ್ದು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ ಕಾಂಗ್ರೆಸ್ ನಿಂದ ಹೊರ ಬರುವ ಮುನ್ಸೂಚನೆ ನೀಡಿದ್ದಾರೆ. ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಯಾವುದೇ ಸೂಚನೆ ನೀಡದೆ ತನ್ನನ್ನು ಉಪಾಧ್ಯಕ್ಷ ಸ್ಥಾನದಿಂದ ತೆರವುಗೊಳಿಸಿದ್ದು ಮುನಿಯಾಲುರನ್ನು ಆಕ್ರೋಶಕ್ಕಿಡು ಮಾಡಿತ್ತು. ಮೊಯಿಲಿ ತಂಡದ ರಾಜಕೀಯದಿಂದ ಮುನಿಯಾಲು ಕಾಂಗ್ರೆಸ್ ರಾಜಕೀಯ ದಿಂದ ದೂರ ಸರಿಯುವಂತೆ ಮಾಡಿತ್ತು. ಒಂದು ಕಾಲದಲ್ಲಿ ಘಟಾನುಘಟಿ ನಾಯಕರನ್ನು ನೀಡಿದ್ದ ಕುಂದಾಪುರ ಕ್ಷೇತ್ರ ಈಗ ಬಿಜೆಪಿಯ ಭದ್ರಕೋಟೆ.
ರಾಜ್ಯದ ಮಾಜಿ ಸಚಿವರಾಗಿರುವ ವಿನಯ ಕುಮಾರ್ ಸೊರಕೆ ಮತ್ತು ಪ್ರಮೋದ್ ಮಧ್ವರಾಜ್ ನಡುವೆ ರಾಜಕೀಯದ ಶೀತಲ ಸಮರ ನಡೆಯುತ್ತಿದ್ದು, ಉಡುಪಿ ಜಿಲ್ಲಾ ಕಾಂಗ್ರೆಸ್ ಇಬ್ಭಾಗದತ್ತ ಸಾಗುತ್ತಿದೆ. ತಮಗೆ ಬೇಕಾದವರನ್ನು ವಿವಿಧ ಹುದ್ದೆಗಳಿಗೆ ನೇಮಿಸಿ, ಕಾರ್ಯಕರ್ತರ ಆಕ್ರೋಶಕ್ಕೆ ಕಾರಣರಾಗುತ್ತಿದ್ದಾರೆ. ಇವರಿಬ್ಬರ ನಡುವೆ ಮಾಜಿ ಶಾಸಕ ಯು ಆರ್ ಸಭಾಪತಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬೆಂಬಲಿತ ಜನಾರ್ದನ್ ತೋನ್ಸೆಯವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ದಿನ ಬೆಳಗಾಗುವುದರೊಳಗೆ ಬದಲಾಯಿಸಿದ ಎಂಬ ಆರೋಪವಿರುವ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ತನ್ನ ಆಪ್ತ ಮತ್ತು ಪ್ರಮೋದ್ ಮಧ್ವರಾಜ್ ರವರ ಎದುರಾಳಿ ಎಂದೇ ಬಿಂಬಿತರಾಗಿರುವ ಅಶೋಕ್ ಕುಮಾರ್ ಕೊಡವೂರು ರವರನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದರು. ಇದು ಪ್ರಮೋದ್ ಮಧ್ವರಾಜ್ ಮತ್ತು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಮಾತ್ರವಲ್ಲದೆ ವಿನಯಕುಮಾರ್ ಸೊರಕೆ ತನ್ನ ಕಾಪು ಕ್ಷೇತ್ರವನ್ನು ಬಿಟ್ಟು ಉಡುಪಿ ವಿಧಾನಸಭಾ ಕ್ಷೇತ್ರದ ಒಳಗೂ ತನ್ನ ಪ್ರಭಾವವನ್ನು ಬೆಳೆಸುವುದಕ್ಕೆ ಮಧ್ವರಾಜ್ ಕೆಂಡಾಮಂಡಲರಾಗಿದ್ದು ರಾಜಕೀಯದಿಂದ ಸೈಲೆಂಟ್ ಆಗಿದ್ದರು. ಇವರಿಬ್ಬರ ರಾಜಕೀಯದಾಟಕ್ಕೆ ಕಾಂಗ್ರೆಸ್ ಅಧ ಪತನಕ್ಕೆ ಇಳಿದ್ದಿತ್ತು. ಹುದ್ದೆಯಲ್ಲಿದ್ದ ಪ್ರಮುಖ ನಾಯಕರನ್ನು ಹೇಳದೆ ಕೇಳದೆ ಬದಲಾಯಿಸಿದ್ದು, ಅವರ ಬೆಂಬಲಿಗರಲ್ಲಿ ನೋವುಂಟು ಮಾಡಿತ್ತು. ಹಲವು ಮುಂಚೂಣಿ ನಾಯಕರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ನಲ್ಲಿ ನಾಯಕರಿಗೇನು ಬರ ಇಲ್ಲ. ಆದರೆ ಅವರನ್ನು ಉಪಯೋಗಿಸುವಲ್ಲಿ ನಾಯಕತ್ವದ ಕೊರತೆಯಿದೆ. ಮುನಿಯಾಲು ಉದಯಕುಮಾರ್ ಶೆಟ್ಟಿ, ಕಿಶನ್ ಹೆಗ್ಡೆ, ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ನವೀನ್ ಚಂದ್ರ ಶೆಟ್ಟಿಯಂತಹ ಪ್ರಮುಖ ನಾಯಕರಿದ್ದರೂ, ಮಾಜಿ ಸಚಿವರಿಬ್ಬರು, ಇಂತಹ ನಾಯಕರಿಗೆ ಅವಕಾಶವನ್ನೇ ನೀಡುತ್ತಿಲ್ಲ.
ರಾಜ್ಯ ಕೇಂದ್ರದಲ್ಲಿ ಕಾಂಗ್ರೆಸ್ ನಾಯಕತ್ವ ಹಿನ್ನಡೆ ಅನುಭವಿಸುತ್ತಿರುವ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಳಿಕ ಮತ್ತೆ ಕಾಂಗ್ರೆಸ್ ಮರುಜೀವ ಪಡೆಯುವ ಲಕ್ಷಣ ಗೋಚರಿಸಿತ್ತು. ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ವಿವಿಧ ಗ್ರಾಮ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಭರ್ಜರಿಯಾಗಿ ನಡೆಸಿತ್ತು. ಆದರೆ ಹಂತಹಂತವಾಗಿ ಬದಲಾವಣೆಯತ್ತ ಸಾಗುತ್ತಿರುವ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರನ್ನು ನಡುದಾರಿಯಲ್ಲಿ ನಿಲ್ಲಿಸಿದೆ. ಜಿಲ್ಲೆಯಲ್ಲಿ ನಡೆದ ಪ್ರಮುಖ ಪ್ರತಿಭಟನೆಗಳಲ್ಲಿ ಕೂಡ ಕಾಂಗ್ರೆಸ್ ಹಿನ್ನಡೆಯನ್ನು ಕಂಡಿತ್ತು. ಕಾರ್ಯಕರ್ತರ ಬಲ ಇದ್ದರೂ ನಾಯಕರ ಒಗ್ಗಟ್ಟಿನ ಕೊರತೆಯಿಂದ ಪದೇಪದೆ ಕಾಂಗ್ರೆಸ್ ಹಿನ್ನಡೆಯನ್ನು ಕಂಡಿದೆ.
ನವೆಂಬರ್ 29ರಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್, ಅಧ್ಯಕ್ಷರಾದ ಬಳಿಕ ಪ್ರಪ್ರಥಮ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಬಲ ನೀಡಬೇಕಾಗಿದ್ದರೂ, ಜಿಲ್ಲಾ ಕಾಂಗ್ರೆಸ್ ನ ಬಣ ರಾಜಕೀಯದಿಂದ ರಾಜ್ಯಾಧ್ಯಕ್ಷರಿಗೆ ಮೌನ ಪ್ರತಿಭಟನೆಯ ಬಿಸಿ ಮುಟ್ಟಿಸುವ ಸಿದ್ಧತೆಯನ್ನು ವಿವಿಧ ಮುಖಂಡರು ಮತ್ತು ಕಾರ್ಯಕರ್ತರು ನಡೆಸಲು ಸಜ್ಜಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮತ್ತು ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ಸರ್ವಾಧಿಕಾರಿ ಧೋರಣೆಯ ಪಕ್ಷ ಹಿನ್ನಡೆಗೆ ಕಾರಣ ಎನ್ನುತ್ತಾರೆ ಹೆಸರು ಹೇಳದ ಮುಖಂಡರು.
ಕನಿಷ್ಠ 200ಕ್ಕೂ ಅಧಿಕ ಕಾರ್ಯಕರ್ತರು, ರಾಜ್ಯಾಧ್ಯಕ್ಷರ ಕಾರ್ಯಕ್ರಮ ನಡೆಯುವ ಬಾಸೆಲ್ ಮಿಷನ್ ಸಭಾ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದು, ಜಿಲ್ಲೆಗೆ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಭೇಟಿ ನೀಡುತ್ತಿರುವ ಕನಕಪುರದ ಬಂಡೆಗೆ ಉಡುಪಿಯ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ನ ಆಡಳಿತ ವೈಫಲ್ಯದ ವಿರುದ್ಧ ಬಿಸಿಮುಟ್ಟಿಸಲು ಸಜ್ಜಾಗಿದ್ದಾರೆ. ಈ ಪ್ರತಿಭಟನೆ ಯಾವ ರೀತಿ ಬದಲಾವಣೆ ಯಾಗುತ್ತದೆ ಎಂದು ಕಾದು ನೋಡಬೇಕಾಗಿದೆ. ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಇನ್ನಷ್ಟೇ ಸಜ್ಜಾಗಬೇಕಾಗಿದ್ದು, ನೂತನ ರಾಜ್ಯಾಧ್ಯಕ್ಷರ ಉಡುಪಿ ಭೇಟಿ ನವ ಚೈತನ್ಯ ಮೂಡಿಸಿದೆಯಾದರೂ, ನಾಯಕರ ಒಗ್ಗಟ್ಟಿನ ಕೊರತೆಯಿಂದ ಪಕ್ಷ ಮತ್ತಷ್ಟು ಹಿನ್ನಡೆಗೆ ತಲುಪುವುದರಲ್ಲಿ ಅನುಮಾನವಿಲ್ಲ.