ನ.27(ನಾಳೆ)ರಂದು ಕೋಟೇಶ್ವರ, ಉಡುಪಿಯಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ

ಉಡುಪಿ, ನ.26: (ಉಡುಪಿ ಟೈಮ್ಸ್ ವರದಿ) ಗ್ರಾಮ ಪಂಚಾಯತ್ ಚುನಾವಣೆಗೆ ಪೂರ್ವಭಾವಿಯಾಗಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನವೆಂಬರ್ 27 ರಂದು ಉಡುಪಿ ಜಿಲ್ಲೆಯ ಎರಡು ಕಡೆ ಗ್ರಾಮ ಸ್ವರಾಜ್ಯ ಸಮಾವೇಶ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅವರು ಜಿಲ್ಲಾ ಬಿಜೆಪಿ ಕಚೇರಿ ಕಡಿಯಾಳಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, “ಉಡುಪಿಯಲ್ಲಿ ಶ್ರೀಕೃಷ್ಣ ದರ್ಶನ ಪಡೆದು, ಗೋಪೂಜೆ ಮಾಡಿ ನಂತರ ಕೋಟೇಶ್ವರದಲ್ಲಿ ರಾಜ್ಯದ ಮೊದಲ ಸಮಾವೇಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಿಂದ ಚಾಲನೆ ಸಿಗಲಿದೆ” ಎಂದು ಹೇಳಿದರು.

ಉಡುಪಿ ಗ್ರಾಮಾಂತರ, ಕುಂದಾಪುರ, ಬೈಂದೂರು ಮಂಡಲಗಳಿಗೆ ಸಂಬಂಧಿಸಿದಂತೆ ಬೆಳಗ್ಗೆ 11.00ಕ್ಕೆ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಮತ್ತು ಉಡುಪಿ ನಗರ, ಕಾಪು, ಕಾರ್ಕಳ ಮಂಡಲಗಳಿಗೆ ಸಂಬಂಧಿಸಿದಂತೆ ಮಧ್ಯಾಹ್ನ 3.00ಕ್ಕೆ ಅಮೃತ್‌ ಗಾರ್ಡನ್, ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಬಳಿ, ಅಂಬಾಗಿಲು-ಪುತ್ತೂರು ಉಡುಪಿಯಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶಗಳು ನಡೆಯಲಿವೆ.

ಜಿಲ್ಲೆಯ 154 ಗ್ರಾಮ ಪಂಚಾಯತ್‌ಗಳ ಪೈಕಿ 98 ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿ ಬೆಂಬಲಿತ ಆಡಳಿತವಿತ್ತು. ಮುಂದಿನ ಚುನಾವಣೆಯಲ್ಲಿ 130 ಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕುಟುಂಬ ಮಿಲನ ಕಾರ್ಯಕ್ರಮಗಳ ಜೊತೆಗೆ ಪಂಚರತ್ನ ಸಮಿತಿ ಹಾಗೂ ಪೇಜ್ ಪ್ರಮುಖರ ನೇಮಕ ಮಾಡಲಾಗಿದೆ.

ಮಂಗಳೂರು ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಡಾ| ಸಿ.ಎನ್. ಅಶ್ವತ್ ನಾರಾಯಣ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಉಪಾಧ್ಯಕ್ಷೆ ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಎಸ್.ಮುನಿಸ್ವಾಮಿ, ರಾಜ್ಯ ಉಪಾಧ್ಯಕ್ಷ ಶಂಕರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಹಾಗೂ ಜಿಲ್ಲೆಯ ಶಾಸಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಒಟ್ಟು ಆರು ತಂಡಗಳು ರಾಜ್ಯ ವ್ಯಾಪಿ ಗ್ರಾಮ ಸ್ವರಾಜ್ಯ ಸಮಾವೇಶ ನಡೆಸಲಿವೆ.

ಸಮಾವೇಶದಲ್ಲಿ ಗ್ರಾಮ ಪಂಚಾಯತ್ ಪ್ರಮುಖರ ಸಹಿತ ಸಂಸದರು, ಶಾಸಕರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ -ಮಂಡಲಗಳ ಪದಾಧಿಕಾರಿಗಳು, ಮಂಡಲಗಳ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಮಹಾಶಕ್ತಿ ಕೇಂದ್ರ ಮತ್ತು ಶಕ್ತಿಕೇಂದ್ರಗಳ ಪ್ರಮುಖರು, ಜಿಲ್ಲಾ ಪಂಚಾಯತ್-ತಾಲೂಕು ಪಂಚಾಯತ್-ಕೃಷಿ ಉತ್ಪನ್ನ ಮಾರುಕಟ್ಟೆಯ ಚುನಾಯಿತ ಸದಸ್ಯರು, ಮಂಡಲಗಳ ಗ್ರಾಮ ಪಂಚಾಯತ್ ಚುನಾವಣಾ ಪ್ರಭಾರಿಗಳು ಭಾಗವಹಿಸಲಿದ್ದಾರೆ.ಜಿಲ್ಲೆಯಾದ್ಯಂತ ಪ್ರತೀ ಗ್ರಾಮ ಪಂಚಾಯತ್‌ಗಳಲ್ಲಿ ಜಯಬೇರಿಗಳಿಸುವ ಹುಮ್ಮಸ್ಸಿನೊಂದಿಗೆ ಕಾರ್ಯಕರ್ತರ ತಂಡ ಸಜ್ಜಾಗಿದೆ ಎಂದು ಕುಯಿಲಾಡಿ ತಿಳಿಸಿದರು.
ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಪ್ರಕೋಷ್ಠದ ಸಂಚಾಲಕ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!