ಎರಡೆರೆಡು ಕಡೆ ಮೀಟಿಂಗ್ ಮಾಡುವ ಬಿಜೆಪಿಯನ್ನು ಒಡೆದ ಮಡಕೆ ಎನ್ನದೇ ಗಟ್ಟಿ ಮಡಕೆ ಎನ್ನಬೇಕೇ?: ಸಿದ್ದರಾಮಯ್ಯ
ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ಎಲ್ಲರೂ ಒಂದಾಗಿದ್ದಾರೆಯೇ? ಒಂದಾಗಿದ್ದರೆ ಎರಡೆರಡು ಪ್ರತ್ಯೇಕ ಸಭೆ ಮಾಡುತ್ತಿರುವುದೇಕೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅನ್ನು ಒಡೆದ ಮನೆ ಎಂದು ಟೀಕಿಸಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರಿಗೆ ಮರುಪ್ರಶ್ನೆ ಹಾಕಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಜಾರಕಿಹೊಳಿ ಒಂದು ಸಭೆ ಮಾಡಿದರೆ, ರೇಣುಕಾಚಾರ್ಯ ಮತ್ತೊಂದು ಸಭೆ ಮಾಡುತ್ತಾನೆ. ಇವರನ್ನು ಒಡೆದ ಮಡಕೆ ಎನ್ನದೇ ಬಹಳ ಗಟ್ಟಿಯಾದ ಮಡಕೆ ಎನ್ನಬೇಕೇ? ಎಂದು ಲೇವಡಿ ಮಾಡಿದರು.
ನಾನು ನನ್ನ ಮಾಹಿತಿ ಮೇಲೆ ಸಿಎಂ ಬಲದಾಗುತ್ತಾರೆ ಎಂದಿದ್ದೆ. ಆದರೆ ಬಿಜೆಪಿಯವರು ಯಡಿಯೂರಪ್ಪ ಅವರೇ ಉಳಿದುಕೊಳ್ಳುತ್ತಾರೆ ಎನ್ನುತ್ತಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಕೆಲಸ ಮಾಡುವವರು ಸಿಎಂ ಆಗಲೀ ಎಂದು ಮಾರ್ಮಿಕವಾಗಿ ಹೇಳಿದರು.
ಹಿಂದುಳಿದ ವರ್ಗಗಳ ಆಯೋಗಕ್ಕೆ ನೂತನವಾಗಿ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗಡೆ ಸರ್ಕಾರಕ್ಕೆ ಜಾತಿ ಸಮೀಕ್ಷೆ ವರದಿ ಕೊಡುತ್ತಾರಾದರೂ ಸರ್ಕಾರ ಅದನ್ನು ಸ್ವೀಕರಿಸಬೇಕು. ಆದರೆ ಸರ್ಕಾರ ಜಾತಿಗಣತಿ ಸ್ವೀಕರಿಸುವ ಕೆಲಸ ಮಾಡುತ್ತಿಲ್ಲ. ವರದಿಯಲ್ಲಿ ಏನಿದೆ ಎಂಬುದು ತಮಗೂ ಗೊತ್ತಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ 16 ಕೋಟಿ ರೂ. ಖರ್ಚು ಮಾಡಿ ಜಾತಿಗಣತಿ ಸಮೀಕ್ಷೆ ಮಾಡಲಾಗಿದೆ. ಸರ್ಕಾರ ವರದಿಯನ್ನೊಮ್ಮೆ ನೋಡಲಿ. ಸುಮ್ಮನೆ ಮೊಸರಿನಲ್ಲಿ ಕಲ್ಲು ಹುಡುಕುವುದು, ಒಲ್ಲದ ಗಂಡನಿಗೆ ಮದುವೆ ಏಕೆ ಎನ್ನುವಂತೆ ಮಾಡಬಾರದು ಎಂದರು.