ಬಳ್ಳಾರಿ ಜಿಲ್ಲೆಯ ವಿಭಜನೆ ಖಂಡನೆ: ವಿವಿಧ ಸಂಘಟನೆಗಳಿಂದ ರಸ್ತೆ ತಡೆ
ಬಳ್ಳಾರಿ(ಉಡುಪಿ ಟೈಮ್ಸ್ ವರದಿ): ಗಣಿನಾಡು ಬಳ್ಳಾರಿ ಜಿಲ್ಲೆಯ ವಿಭಜನೆ ಖಂಡಿಸಿ, ಬಳ್ಳಾರಿ ಬಂದ್‌ಗೆ ಕರೆ ನೀಡಿದ್ದ ಅಖಂಡ ಬಳ್ಳಾರಿ ಜಿಲ್ಲೆ ಹೋರಾಟ ಸಮಿತಿ ಕಾರ್ಯಕರ್ತರು ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಇಂದು ಬೆಳ್ಳಂಬೆಳಗ್ಗೆ ರಸ್ತೆ ತಡೆ ನಡೆಸಿದರು.
ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಜಮಾಯಿಸಿದ ವಿವಿಧ ಕನ್ನಡಪರ, ರೈತಪರ ಹಾಗೂ ಇತರ 15 ಕ್ಕೂ ಹೆಚ್ಚು ಸಂಘಟನೆಗಳ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿ ಬಂದ್‌ಗೆ ಚಾಲನೆ ನೀಡಿದರು. ಬಳಿಕ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಾಹನ ತಡೆ ನಡೆಸಿದರು. ಬಳ್ಳಾರಿ ಬಂದ್ ಪೂರ್ವ ನಿಯೋಜಿತವಾಗಿದ್ದ ಕಾರಣ ಬೆಳ್ಳಂಬೆಳಗ್ಗೆ ನಗರದ ಪ್ರಮುಖ ರಸ್ತೆಯಲ್ಲಿ ಔಷಧ ಮಳಿಗೆಯನ್ನು ಹೊರತುಪಡಿಸಿ ಯಾವುದೇ ವಾಣಿಜ್ಯ ಮಳಿಗೆಗಳು ತೆರೆದಿರಲಿಲ್ಲ. ಬಂದ್‌ಗೆ ಆಟೋ ಚಾಲಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದರಿಂದ ಬಹುತೇಕ ಅಟೋಗಳು ರಸ್ತೆಗಿಳಿದಿರಲಿಲ್ಲ.
ಸ್ಥಳದಲ್ಲಿ ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಹ ಸ್ಥಳದಲ್ಲಿ ಬೀಡುಬಿಟ್ಟಿದ್ದು, ನಗರದ ಆಯಕಟ್ಟಿ ಸ್ಥಳದಲ್ಲಿ ಹದ್ದಿನ ಕಣ್ಣು ಇರಿಸಿರುವ ಪೊಲೀಸ್ ಇಲಾಖೆ, 3 ಡಿವೈಎಸ್ ಪಿ, 18 ಸಿಪಿಐ, 40 ಪಿಎಸ್‌ಐ, 200 ಪೊಲೀಸ್ ಪೇದೆ, 3 ಡಿಎಆರ್ ತುಕಡಿಗಳನ್ನು ನಿಯೋಜನೆ ಮಾಡಿದೆ ಎಂದು ತಿಳಿದು ಬಂದಿದೆ.