ನಿವಾರ್ ಚಂಡಮಾರುತ – ರಾಜ್ಯದ ಕೆಲವೆಡೆ ರೆಡ್ ಅಲರ್ಟ್: ಸಿಎಂ ಬಿ.ಎಸ್.ವೈ
ಮೈಸೂರು: ತಮಿಳುನಾಡಿನಲ್ಲಿ ಈಗಾಗಲೇ ಅಬ್ಬರಿಸುತ್ತಿರುವ ನಿವಾರ್ ಚಂಡಮಾರುತ ಬೆಂಗಳೂರಿಗೂ ಅಪ್ಪಳಿಸುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ, ಕೆಲವು ಕಡೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ ಬಿ.ಎಸ್.ವೈ ಅವರು, ಚಂಡಮಾರುತ ಬಂದರೆ ನಾವು, ನೀವು ತಡೆಯೋಕಾಗೋಲ್ಲ. ಆದರೂ ಅಗತ್ಯ ಕ್ರಮ ಕೈಗೊಳ್ಳಲು ಸಂಬoಧಿಸಿವರಿಗೆ ಸೂಚಿಸಿದ್ದೇವೆ. ಕೆಲವು ಕಡೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ
ತಮಿಳುನಾಡು ಹಾಗೂ ಪುದುಚೇರಿಯ ಕರಾವಳಿ ಪ್ರದೇಶದಲ್ಲಿ ನಿವಾರ್‌ನ ಅಬ್ಬರಕ್ಕೆ ಜನತರು ತತ್ತರಿಸಿಹೋಗಿದ್ದಾರೆ. ನೆರೆಯ ರಾಜ್ಯಕ್ಕೆ ಅಪ್ಪಳಿಸಿರುವ ಈ ಮಾರುತದಿಂದ ಬೆಂಗಳೂರಿನಲ್ಲೂ ಎರಡು ದಿನಗಳ ಕಾಲ ಮಳೆ ಬರುವ ಸಾಧ್ಯತೆ ಇದೆ. ಗಂಟೆಗೆ 120ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಭಾರೀ ಅನಾಹುತ ಉಂಟಾಗುವ ಭೀತಿ ಮೂಡಿಸಿದೆ. ಅಲ್ಲದೆ ಬೆಂಗಳೂರಿನಲ್ಲಿ ಈಗಾಗಲೇ ಚಂಡಮಾರುತದ ಪ್ರಭಾವ ಕಂಡು ಬಂದಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಮಂಡ್ಯ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಎರಡು ದಿನ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಈ ಭಾಗಗಳಲ್ಲಿ ಎರಡೂ ದಿನ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.