ಗ್ರಾಮ ಪಂಚಾಯತ್ ಚುನಾವಣೆ ಯಶಸ್ವಿಗೊಳಿಸಲು ನ.27ರಂದು ಗ್ರಾಮ ಸ್ವರಾಜ್ ಸಮಾವೇಶ: ಕುಯಿಲಾಡಿ
ಉಡುಪಿ: ಗ್ರಾಮ ಸ್ವರಾಜ್ ಪರಿಕಲ್ಪನೆಗೆ ಅನುಗುಣವಾಗಿ ರಾಜ್ಯ ಬಿಜೆಪಿಯ ಸೂಚನೆಯಂತೆ ಜಿಲ್ಲೆಯ ಎರಡು ಕಡೆಗಳಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಪೂರ್ವ ಸಿದ್ಧತೆ ಹಾಗೂ ಯಶಸ್ಸಿಗಾಗಿ ಗ್ರಾಮ ಸ್ವರಾಜ್ ಸಮಾವೇಶಗಳು ನಡೆಯಲಿವೆ. ನ.27ರಂದು ಉಡುಪಿ ಜಿಲ್ಲಾ ವ್ಯಾಪ್ತಿಯ ಕುಂದಾಪುರ ಮತ್ತು ಉಡುಪಿಯಲ್ಲಿ ನಡೆಯಲಿರುವ ಮಂಡಲವಾರು ಗ್ರಾಮ ಸ್ವರಾಜ್ ಸಮಾವೇಶಗಳಲ್ಲಿ ಪಕ್ಷದ ನಿಗದಿತ ಅಪೇಕ್ಷಿತ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿ ಸಮಾವೇಶಗಳನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ನ.24ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಯವರು ನ.27ರ ಬೆಳಿಗ್ಗೆ9.30ಕ್ಕೆ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಗೋಮಾತಾ ಪೂಜನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಎರಡೂ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬೈಂದೂರು, ಕುಂದಾಪುರ ಮತ್ತು ಉಡುಪಿ ಗ್ರಾಮಾಂತರ ಮಂಡಲಗಳ ಸಮಾವೇಶ ಬೆಳಿಗ್ಗೆ 11 ಕ್ಕೆ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಹಾಗೂ ಉಡುಪಿ ನಗರ, ಕಾಪು ಮತ್ತು ಕಾರ್ಕಳ ಮಂಡಲಗಳ ಸಮಾವೇಶ ಮಧ್ಯಾಹ್ನ3 ಕ್ಕೆ ಅಮೃತ್ ಗಾರ್ಡನ್ ಎಲ್.ವಿ.ಟಿ ಅಂಬಾಗಿಲು ಅಪೇಕ್ಷಿತ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಯಾ ಮಂಡಲವಾರು ಸಮಾವೇಶಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಉಡುಪಿ ಜಿಲ್ಲೆಯ 130 ಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳನ್ನು ಗೆಲ್ಲುವ ಗುರಿಯನ್ನು ಸಾಕಾರಗೊಳಿಸುವತ್ತ ದೃಢ ಸಂಕಲ್ಪದೊಂದಿಗೆ ಶ್ರಮಿಸಬೇಕು ಎಂದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ ಗ್ರಾಮ ಪಂಚಾಯತ್ ಚುನಾವಣೆ ಎಂದರೆ ಕಾರ್ಯಕರ್ತರ ಚುನಾವಣೆ. ಉತ್ತಮ ರೀತಿಯಲ್ಲಿ ಪ್ರಾರಂಭಿಸಿದ ಎಲ್ಲಾ ಕೆಲಸಕಾರ್ಯಗಳೂ ಯಶಸ್ವಿಯಾಗುತ್ತವೆ. ರಾಜ್ಯ ಬಿಜೆಪಿಯ ಸೂಚನೆಯಂತೆ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 80%ಕ್ಕೂ ಮಿಕ್ಕಿ ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿ ಬೆಂಬಲಿತ ಆಡಳಿತ ಹೊಂದುವ ಗುರಿ ಇದೆ. ಈ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಪಂಚರತ್ನ ಸಮಿತಿ ರಚನೆಯ ಜೊತೆಗೆ ಮಹಾಶಕ್ತಿ ಕೇಂದ್ರ ಮಟ್ಟದಲ್ಲಿ ಬಿಜೆಪಿ ಕುಟುಂಬ ಮಿಲನ ಕಾರ್ಯಕ್ರಮಗಳನ್ನು ಶೀಘ್ರವಾಗಿ ಆಯೋಜಿಸಬೇಕು. ಪಕ್ಷ ಸಂಘಟನೆಯ ಜೊತೆಗೆ ನ.27ರಂದು ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮ ಸ್ವರಾಜ್ ಸಮಾವೇಶಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಭರ್ಜರಿ ಗೆಲುವಿನ ಗುರಿಯೊಂದಿಗೆ ತೊಡಗಿಸಿಕೊಳ್ಳಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಗ್ರಾಮ ಸ್ವರಾಜ್ ಸಮಾವೇಶಗಳ ಯಶಸ್ವಿ ಆಯೋಜನೆ ಬಗ್ಗೆ ಮಂಡಲವಾರು ಜವಾಬ್ದಾರಿಗಳ ವಿಸ್ತ್ರತ ಮಾಹಿತಿ ನೀಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಎಸ್. ಕಲ್ಮಾಡಿ ಸ್ವಾಗತಿಸಿ, ಸದಾನಂದ ಉಪ್ಪಿನಕುದ್ರು ವಂದಿಸಿದರು. ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.