ನಿವಾರ್ ಚಂಡಮಾರುತ: ರೆಡ್ ಅಲರ್ಟ್ ಘೋಷಣೆ!

ನವದೆಹಲಿ: ನಿವಾರ್ ಚಂಡಮಾರುತ ಬುಧವಾರ ರಾಂತ್ರಿ 8 ಗಂಟೆ ವೇಳೆಗೆ ತಮಿಳುನಾಡಿನ ಕರಾವಳಿ ಮೇಲೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಲ್ಲದೆ, ನಿವಾರ್ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 

ಮಂಗಳವಾರ ರಾತ್ರಿಯೇ ನಿವಾರ್ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿದೆ. ಬುಧವಾರ ಅದು ತಮಿಳುನಾಡು ಮತ್ತು ಪುದುಚೇರಿಯನ್ನು ಕಾರೈಕಲ್ ಮತ್ತು ಮಾಮಲ್ಲಪುರಂ ನಡುವೆ ಹಾದು ಹೋಗಲಿದೆ. 

ಈ ವೇಳೆಗೆ ಗಂಟೆಗೆ 120-130 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಈ ಹಿನ್ನೆಲೆಯಲ್ಲಿ ಮೂರು ರಾಜ್ಯಗಳಲ್ಲಿ ಭಾರೀ ಮಳೆಯ ಸಾಧ್ಯತೆಗಳಿವೆ. ಹೀಗಾಗಿ ಯಾರೂ ಕೂಡ ಮೀನುಗಾರಿಕೆಗೆ, ಮೋಟಾರ್ ಬೋಟ್ಸ್ ಸೇರಿ ಇನ್ನಿತರೆ ಚಟುವಟಿಕೆಗಳಿಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ತಮಿಳುನಾಡಿನಲ್ಲಿ ಮಂಗಳವಾರದಿಂದಲೇ ಮಳೆಯಾಗುತ್ತಿದ್ದು, ಚಂಡಮಾರುತದ ಹಿನ್ನೆಲೆಯಲ್ಲಿ ಬುಧವಾರ ರಜೆ ಘೋಷಿಸಲಾಗಿದೆ. ಅಲ್ಲದೆ 7 ಜಿಲ್ಲೆಗಳಲ್ಲಿ ಬಸ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳಿ ತಿಳಿಸಿವೆ.

ಈ ನಡುವೆ ಚಂಡಮಾರುತದ ಸವಾಲುಗಳನ್ನು ಎದುರಿಸಲು ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 1200 ಸಿಬ್ಬಂದಿ ಸಜ್ಜಾಗಿದ್ದಾರೆ. ಇತರೆ 800 ಹೆಚ್ಚುವರಿ ಮಂದಿ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಮತ್ತೊಂದೆಡೆ ಬುಧವಾರ ಆಂಧ್ರಪ್ರದೇಶದ ಮೇಲೆ ಗತಿ ಚಂಡಮಾರುತ ಕೂಡ ದಾಳಿ ನಡೆಸಲಿದೆ. 

Leave a Reply

Your email address will not be published. Required fields are marked *

error: Content is protected !!