ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಇನ್ನಿಲ್ಲ
ನವದೆಹಲಿ: ರಾಜ್ಯ ಸಭಾ ಸದಸ್ಯ, ಕಾಂಗ್ರೆಸ್ನ ಹಿರಿಯ ನಾಯಕ ಅಹ್ಮದ್ ಪಟೇಲ್(71) ಇಂದು ವಿಧಿವಶರಾಗಿದ್ದಾರೆ. ಅಹ್ಮದ್ ಪಟೇಲ್ ಅವರಿಗೆ ಕೆಲ ವಾರಗಳ ಹಿಂದಷ್ಟೇ ಕೊರೊನಾ ಸೋಂಕು ತಗುಲಿತ್ತು. ಗುರುಗ್ರಾಮದ ಮೆಡಂತಾ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕೂ ಮುನ್ನ ಫರಿದಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ಹೀಗಾಗಿ ಮೆಡಂತಾ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.
ತಮಗೆ ಕೊರೊನಾ ಸೋಂಕು ತಗುಲಿದ ಕುರಿತು ಅಕ್ಟೋಬರ್ 1ರಂದು ಸ್ವತಃ ಅಹ್ಮದ್ ಪಟೇಲ್ ಅವರೇ ಖಚಿತಪಡಿಸಿದ್ದರು. ಅಲ್ಲದೆ ಹೋಮ್ ಐಸೋಲೇಟ್ ಆಗುತ್ತಿರುವುದಾಗಿ ಮಾಹಿತಿ ನೀಡಿದ್ದರು. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಫರಿದಾಬಾದ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೂ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಮೆಡಂತಾ ಆಸ್ಪತ್ರೆಗೆ ದಾಖಲಾಗಿದ್ದರು.
71 ವರ್ಷದ ಅಹ್ಮದ್ ಪಟೇಲ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಾಂಗ್ರೆಸ್ ಖಜಾಂಚಿಯಾಗಿದ್ದರು.
ಅಹ್ಮದ್ ಪಟೇಲ್ ಮಗ ಫೈಸಲ್ ಅವರು ತಂದೆಯ ಆರೋಗ್ಯ ಸ್ಥಿತಿಗತಿ ಕುರಿತು ಭಾನುವಾರ ಹೇಳಿಕೆ ನೀಡಿದ್ದು, ನನ್ನ ತಂದೆಯ ಆರೋಗ್ಯ ಸ್ಥಿರವಾಗಿದೆ. ಆದರೆ ವೈದ್ಯಕೀಯ ನಿಗಾದಲ್ಲಿ ಮುಂದುವರಿಯಲಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಅವರು ಬೇಗನೆ ಗುಣಮುಖರಾಗಲೆಂದು ಪ್ರಾರ್ಥಿಸಿ ಎಂದು ಮನವಿ ಮಾಡುತ್ತೇನೆ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ಫೈಸಲ್ ಮನವಿ ಮಾಡಿಕೊಂಡಿದ್ದರು.
1949ರ ಆ. 21ರಂದು ಗುಜರಾತ್ನಲ್ಲಿ ಜನಿಸಿದ್ದ ಅಹ್ಮದ್ ಪಟೇಲ್ ಲೋಕಸಭೆಗೆ 3 ಬಾರಿ ಆಯ್ಕೆಯಾಗಿದ್ದರು. 5 ಬಾರಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಜೊತೆಗೆ ಸೋನಿಯಾಗಾಂಧಿ ರಾಜಕೀಯ ಕಾರ್ಯದರ್ಶಿ ಆಗಿದ್ದರು.