ಕೊರೋನಾ ಸೋಂಕು ಮುಕ್ತರಾದ ಉಡುಪಿಯ 9 ಪೊಲೀಸರು ಡಿಸ್ಚಾರ್ಜ್
ಉಡುಪಿ: ಲಾಕ್ ಡೌನ್ ಹೇರಿಕೆಯಾದಂದಿನಿಂದ ಉಡುಪಿ ಜಿಲ್ಲೆಯ ಪೊಲೀಸರು ಹಗಲು ರಾತ್ರಿ ಎನ್ನದೆ ನಿರಂತರ ತಮ್ಮ ವೃತ್ತಿ ನಿಭಾಯಿಸಿದ್ದಾರೆ. ಆದರೂ ಸರಕಾರ ಅವರಿಗೆ ತಮ್ಮ ಭದ್ರತೆಗಾಗಿ ಸರಿಯಾದ ಮಾಸ್ಕ್, ಗ್ಲಾವ್ಸ್ ಗಳನ್ನು ನೀಡಿಲ್ಲ ಎಂಬ ಆರೋಪದ ನಡುವೆಯೂ ಪೊಲೀಸರು ಜಿಲ್ಲೆಯ ಗಡಿ ಭಾಗಗಳಲ್ಲಿ, ಕೊರೋನಾ ಸೋಂಕಿತರ ಮನೆ, ಊರುಗಳನ್ನು ಸೀಲ್ ಡೌನ್ ಮಾಡುವ ಸಮಯದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಬಹಳ ಜಾಗೃತೆ ವಹಿಸಿ ಅವರು ತಮ್ಮ ಕೆಲಸ ನಿರ್ವಹಿಸಿದರೂ, ಉಡುಪಿ ಜಿಲ್ಲೆಯ 9 ಪೊಲೀಸರಿಗೆ ಕೊರೊನಾ ಸೋಂಕು ತಗುಲಿತ್ತು. ಇದರಿಂದ ಸೋಂಕಿತರ ಸಂಪರ್ಕದಲ್ಲಿದ್ದ ಜಿಲ್ಲೆಯ 150 ಕ್ಕೂ ಹೆಚ್ಚೂ ಪೊಲೀಸರಿಗೆ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು.
ಈಗ ಜಿಲ್ಲೆಯ 9 ಪೊಲೀಸರು ಕೊರೋನಾದಿಂದ ಗುಣಮುಖ ಹೊಂದಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದುತ್ತಿರುವುದು ಜಿಲ್ಲೆಯ ಜನತೆಗೆ ಸಂತೋಷದ ವಿಷಯವಾಗಿದೆ.
ಈ ಬಗ್ಗೆ ಡಿಸಿ ಜಿ.ಜಗದೀಶ್, ಉಡುಪಿ ಜಿಲ್ಲೆಯಲ್ಲಿ 9 ಪೊಲೀಸರಿಗೆ ಕೊರೊನಾ ಬಂದಿತ್ತು. ಇಡೀ ಜಿಲ್ಲೆಗೆ ಬಹಳ ಆತಂಕವಾಗಿತ್ತು. ಎಲ್ಲಾ 9 ಜನ ಪೊಲೀಸರು ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದಾರೆ. ಪೊಲೀಸರು, ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಕೊರೊನಾ ವಾರಿಯರ್ಸ್‌ಗಳು. ಕೊರೊನಾ ವಾರಿಯರ್ಸ್‌ಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.
ಸಾರ್ವಜನಿಕವಾಗಿ ಪೊಲೀಸರನ್ನು ಯಾರೂ ಸಂಶಯದಿಂದ ನೋಡಬಾರದು. ಕೊರೊನಾ ಬಂದ ಸಾರ್ವಜನಿಕರನ್ನು ಅಸ್ಪೃಶ್ಯರಂತೆ ನೋಡಬಾರದು. ಪೊಲೀಸರು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ಮಾಡುವ ಯೋಧರು, ಪೊಲೀಸರ ಮೇಲೆ ಸಾರ್ವಜನಿಕರಿಗೆ ಹೆಚ್ಚು ಗೌರವ ಬರಬೇಕು ಎಂದು ತಿಳಿಸಿದರು.