ಕಾರ್ಕಳ: ನ.26 ರಂದು ಅಗೋಳಿ ಮಂಜಣ್ಣ ಚಲನಚಿತ್ರದ ಟೀಸರ್ ಬಿಡುಗಡೆ

ಉಡುಪಿ:(ಉಡುಪಿ ಟೈಮ್ಸ್ ವರದಿ) ತುಳುನಾಡಿನ ವೀರ ಪುರುಷ ಎಂದೇ ಹೆಸರಾದ ಅಗೋಳಿ ಮಂಜಣ್ಣ ಅವರ ಕುರಿತ ಚಿತ್ರವೊಂದು ಮ್ಯಾನ್ ಆಫ್ ತುಳುನಾಡು ಎಂಬ ಟ್ಯಾಗ್‌ಲೈನ್‌ನೊಂದಿಗೆ ಅದ್ದೂರಿ ಬಜೆಟ್‌ನಲ್ಲಿ ಮೂರು ಭಾಷೆಗಳಲ್ಲಿ ಮೂಡಿಬರಲು ಸಿದ್ದಗೊಂಡಿದೆ. ಸದ್ಯ ಈ ಚಿತ್ರ ಕನ್ನಡ, ತುಳು, ಮರಾಠಿ ಭಾಷೆಗಳಲ್ಲಿ ತೆರೆ ಮೇಲೆ ಬರುತ್ತಿದ್ದು, ಚಿತ್ರ ತಂಡ ಚಿತ್ರದ ಟೀಸರ್ ಬಿಡುಗಡೆಗೊಳಿಸಲು ಸಜ್ಜಾಗಿದೆ. ನವೆಂಬರ್ 26 ರಂದು ಸಂಜೆ 6 ಗಂಟೆಗೆ ಕಾರ್ಕಳದ ಕಟೀಲ್ ಇಂಟರ್ ನ್ಯಾಶನಲ್ ಹೋಟೆಲ್‌ನಲ್ಲಿ ಚಿತ್ರದ ಟೀಸರ್ ಬಿಡುಗಡೆಗೊಳ್ಳಲಿದೆ.

ಚಿಕ್ಕಮಗಳೂರು ಜ್ಞಾನ ವಿಜ್ಞಾನ ಮಂದಿರದ ವೇದಬ್ರಹ್ಮ ಕೆ.ಎಸ್. ನಿತ್ಯಾನಂದ ಗುರೂಜಿ ಅವರ ಅನುಗ್ರಹದೊಂದಿಗೆ ಗೋಳಿದಡಿಗುತ್ತು ಗಡಿಕಾರರು ವರ್ಧಮಾನ್ ದುರ್ಗಾ ಪ್ರಸಾದ್ ಶೆಟ್ಟಿ ಅವರ ಪ್ರೇರಣೆಯಂತೆ ಉದ್ಯಮಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರ ಪ್ರೋತ್ಸಾಹದೊಂದಿಗೆ ಈ ಚಿತ್ರ ನಿರ್ಮಾಣವಾಗುತ್ತಿದೆ.

ಸಕ್ಸಸ್ ಫಿಲಂಸ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ, ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ಈ ಚಿತ್ರಕ್ಕೆ ಗುರು ಕಿರಣ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಪಟು ಕೋಟಿ ಚೆನ್ನಯ್ಯ ಧಾರವಾಹಿ ಖ್ಯಾತಿಯ  ರೋಹಿತ್ ಕುಮಾರ್ ಅಗೋಳಿ ಮಂಜಣ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ನವೆಂಬರ್ 26 ರಂದು ನಡೆಯುವ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಮಾಜಿ ಸಚಿವ ಯು.ಟಿ ಖಾದರ್, ಮಾಜಿ ಸಚಿವ ಅಭಯ್ ಚಂದ್ರ ಜೈನ್, ಎಸ್‌ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಎಂ ಎನ್ ರಾಜೇಂದ್ರ ಕುಮಾರ್, ಮಂಗಳೂರಿನ ಶ್ರೀ ದೇವಿ ಎಜುಕೇಶನ್ ಟ್ರಸ್ಟ್ನ ಚೇರ್‌ಮನ್ ಎ.ಸದಾನಂದ ಶೆಟ್ಟಿ, ಒಲಂಪಿಕ್ ಹಾಕಿ ಕಂಚಿನ ಪದಕ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಎಂ.ಪಿ ಗಣೇಶ್, ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಲಾಡಿ ಅಜಿತ್ ಕುಮಾರ್ ರೈ, ಮೂಡಬಿದಿರೆ ಆಳ್ವಾಸ್  ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಬೆಂಗಳೂರು ಪೊಲೀಸ್ ಹೆಚ್ಚುವರಿ ನಿರ್ದೇಶಕ, ಅರುಣ್ ಚಕ್ರವರ್ತಿ (ರೈಲ್ವೇ), ಮಾಜಿ ಎಂಎಲ್‌ಸಿ ಮತ್ತು ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ, ಖ್ಯಾತ ನ್ಯಾಯವಾದಿ ಹಾಗೂ ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಂ.ಕೆ ವಿಜಯ ಕುಮಾರ, ತುಳು ಚಿತ್ರರಂಗದ ನಟ , ನಿರ್ದೇಶಕ ದೇವದಾಸ್ ಕಾಪಿಕಾಡ್, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ.ಆರ್ ರಾಜು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!