ಉಡುಪಿ: ನಗರಸಭೆಯ ಸಾಮಾನ್ಯ ಸಭೆಯ ಸಿಂಧುತ್ವ ಪ್ರಶ್ನಿಸಿ ಬ್ಲಾಕ್ ಕಾಂಗ್ರೆಸ್ ಮನವಿ
ಉಡುಪಿ: ಉಚ್ಛ ನ್ಯಾಯಾಲಯದ ಏಕ ಸದಸ್ಯ ಪೀಠ ಇತ್ತೀಚೆಗೆ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ನ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಯನ್ನು ರದ್ದುಗೊಳಿಸಿ ಆದೇಶ ನೀಡಿದೆ. ರೋಸ್ಟರ್ ಪದ್ದತಿಯನ್ನು ಅನುಸರಿಸಿ ಅಧ್ಯಕ್ಷರ ಉಪಾಧ್ಯಕ್ಷರ ಯಾದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರಕಾರಕ್ಕೆ ಆದೇಶಿಸಿದೆ. ಆ ಪ್ರಕಾರ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪ್ರಸ್ತುತ ಹುದ್ದೆ ಅಮಾನತುಗೊಂಡಿರುವುದರಿಂದ ಅವರಿಗೆ ಯಾವುದೇ ಅಧಿಕಾರಿಗಳ ಸಭೆಯ ಸಾಮಾನ್ಯ ಸಭೆ ಜರಗಿಸಲು ಸಾಂವಿಧಾನಿಕ ಹಕ್ಕು ಇರುವುದಿಲ್ಲ.
ಈ ನಡುವೆ ಉಡುಪಿ ನಗರಸಭೆಯು ನ.26 ರಂದು ಸಾಮಾನ್ಯ ಸಭೆ ನಡೆಯುವ ಬಗ್ಗೆ ಎಲ್ಲಾ ನಗರಸಭಾ ಸದಸ್ಯರಿಗೆ ಹಾಗೂ ಸಂಬಂಧಪಟ್ಟವರಿಗೆ ಕಾರ್ಯಸೂಚಿಯನ್ನು ವಿತರಿಸಿದ್ದಾರೆ. ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಈ ಸಾಮಾನ್ಯ ಸಭೆಯ ಸಿಂಧುತ್ವದ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ಪೌರಾಯುಕ್ತರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಣ್ಣಯ್ಯ ಶೇರಿಗಾರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ನಗರಸಭಾ ಸದಸ್ಯರುಗಳಾದ ಅಮೃತಾ ಕೃಷ್ಣಮೂರ್ತಿ, ರಮೇಶ್ ಕಾಂಚನ್, ಸೆಲಿನ್ ಕರ್ಕಡ, ವಿಜಯ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಮೀನಾಕ್ಷಿ ಮಾಧವ ಬನ್ನಂಜೆ, ಯುವರಾಜ್, ಹಾಗೂ ಯತೀಶ್ ಕರ್ಕೆರಾ, ಮಿಥುನ್ ಅಮೀನ್, ಅಬುಬಕರ್, ಸಾಯಿರಾಜ್ ಮೊದಲಾದವರು ಉಪಸ್ಥಿತರಿದ್ದರು.