ಡಾ.ಸುಧಾಗೆ ಮತ್ತೆ ಎಸಿಬಿ ಶಾಕ್, ಬೆಂಗಳೂರು ಸಹಿತ 9 ಕಡೆ ದಾಳಿ
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಕೆಎಎಸ್ ಅಧಿಕಾರಿ ಡಾ.ಸುಧಾ ಆಪ್ತರ ಮೇಲೆ ಮತ್ತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ಮುಂದುವರೆಸಿದ್ದು, ಏಕಕಾಲದಲ್ಲಿ ನಗರದ 9 ಕಡೆ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ಮಾಡಿ, ಶೋಧ ಕಾರ್ಯ ನಡೆಸುತ್ತಿದೆ.
ಬಿಡಿಎಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಲಂಚ ಪಡೆದಿದ್ದರು ಎಂಬ ಆರೋಪದಲ್ಲಿ ಕೆಎಎಸ್ ಅಧಿಕಾರಿ ಡಾ. ಸುಧಾ ಅವರ ಮನೆ ಮೇಲೆ ನ. 7ರಂದು ಎಸಿಬಿ ದಾಳಿ ನಡೆಸಲಾಗಿತ್ತು. ಇದೀಗ ಮತ್ತೊಮ್ಮೆ ಅವರಿಗೆ ಎಸಿಬಿ ಅಧಿಕಾರಿಗಳು ಶಾಕ್ ನೀಡಿದ್ದು, ಇಂದು ಬೆಳ್ಳಂಬೆಳಗ್ಗೆ ಡಾ. ಸುಧಾ ಅವರ ಸಂಬಂಧಿಕರು ಮತ್ತು ಆಪ್ತರ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ಒಟ್ಟು 9 ಕಡೆಗಳಲ್ಲಿ ಏಕಕಾಲಕ್ಕೆ ಎಸಿಬಿ ದಾಳಿ ನಡೆಸಲಾಗಿದ್ದು, ಮತ್ತಷ್ಟು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಮೂಲಗಳ ಪ್ರಕಾರ ಕೆಎಎಸ್ ಅಧಿಕಾರಿ ಡಾ. ಸುಧಾ ಅವರ ಸ್ನೇಹಿತರು, ಸಂಬಂಧಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿ ಶೋಧ ನಡೆಸಿದೆ. ಬೆಂಗಳೂರಿನ ಹಲವು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಕೆಲ ದಿನಗಳ ಹಿಂದೆ ಸುಧಾ ಅವರ ಮನೆ, ಅವರ ಆಪ್ತೆ ರೇಣುಕಾ ಮನೆ ಸೇರಿದಂತೆ 6 ಕಡೆಗಳಲ್ಲಿ ದಾಳಿ ನಡೆಸಿದ್ದ ವೇಳೆ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನೂರಾರು ಕೋಟಿ ಆಸ್ತಿ ಪತ್ರಗಳು ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆ ನಡೆಸಿದ ಎಸಿಬಿಯಿಂದ ಇಂದು ಮತ್ತೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.
ಬೆಂಗಳೂರು ನಗರ ಮತ್ತು ನಗರದ ಹೊರವಲಯಲ್ಲಿ ದಾಳಿ ನಡೆಸಲಾಗಿದ್ದು, ಕೆಂಗೇರಿಯ ದೊಡ್ಡಾಲದಮರ ಮತ್ತು ನಗರದ ವಿವಿಧ ಭಾಗಗಳಲ್ಲಿ ದಾಳಿ ನಡೆಸಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಪ್ರಭು ಎಂಬುವವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಭೀಮನ ಕುಪ್ಪೆಯ ಪ್ರಭು ಅವರ ಮನೆಯಲ್ಲಿನ ಕಾಗದ ಪತ್ರಗಳನ್ನು ಮುಂದಿಟ್ಟು ಪರಿಶೀಲನೆ ನಡೆಸಲಾಗಿದೆ. ದಾಖಲೆ ಪತ್ರಗಳನ್ನು ಮುಂದಿಟ್ಟುಕೊಂಡು ಪ್ರಭು ಅವರಿಂದ ಮಾಹಿತಿ ಪಡೆಯಲಾಗುತ್ತಿದೆ. ಬೆಂಗಳೂರಿನ ಮಲ್ಲತ್ತಹಳ್ಳಿ, ಐಟಿಐ ಲೇಔಟ್, ರಾಮೋಹಳ್ಳಿ, ಭೀಮನಕುಪ್ಪೆಯಲ್ಲಿ ದಾಳಿ ನಡೆಸಲಾಗಿದೆ.
ನಗರದಲ್ಲಿ ಒಟ್ಟು ಆರು ಕಡೆ ದಾಳಿ ನಡೆಸಲಾಗಿದ್ದು, ಭೀಮನಕುಪ್ಪೆಯಲ್ಲಿ ಮೂರು ಕಡೆ ದಾಳಿ ನಡೆಸಲಾಗಿದೆ. ಇಂದು ಬೆಳಗ್ಗೆ 6.30ಕ್ಕೆ ರಿಯಲ್ ಎಸ್ಟೇಟ್ ಏಜೆಂಟ್ ಮಹೇಶ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ಭೀಮನಕುಪ್ಪೆಯ ನಿವಾಸದಲ್ಲಿ ಇರುವ ಮಹೇಶ್ ಅವರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಅದೇ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಪ್ರಭು ಮನೆ ಮೇಲೂ ದಾಳಿ ನಡೆಸಲಾಗಿದೆ. ಭೀಮನಕುಪ್ಪೆಯಲ್ಲಿ ಮೂರು ಕಡೆ, ಎನ್ ಜಿಎಫ್ ಲೇಔಟ್, ರಾಮಸಂದ್ರ, ಕೆಕೆ ಲೇಔಟ್ ನಲ್ಲಿ ದಾಳಿ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.