ನ.25ಕ್ಕೆ ತಮಿಳುನಾಡು ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮಂಗಳವಾರ ಚಂಡಮಾರುತವಾಗಿ ಪರಿವರ್ತನೆಯಾಗಲಿದ್ದು, ನ.25ಕ್ಕೆ ತಮಿಳುನಾಡು ಕರಾವಳಿಗೆ ಅಪ್ಪಳಿಸುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ನೀಡಿದೆ. 

ಈ ಹಿನ್ನೆಲೆಯಲ್ಲಿ ಸೋಮವಾರ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಮಿಳುನಾಡು ಸರ್ಕಾರವು ಸಭೆ ನಡೆಸಿದ್ದು, ಸಂಬಂಧಪಟ್ಟ ಎಲ್ಲ ಜಿಲ್ಲಾಡಳಿತಗಳೂ ಸಜ್ಜಾಗಿರಬೇಕು ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಸೂಚಿಸಿದ್ದಾರೆ. ‘ಗಂಟೆಗೆ 100–120 ಕಿ.ಮೀ. ವೇಗದಲ್ಲಿ ನ.25ರಂದು ಮಧ್ಯಾಹ್ನ ತಮಿಳುನಾಡು–ಪುದುಚೇರಿ ಕರಾವಳಿಯ ಕರೈಕಲ್‌ ಮತ್ತು ಮಾಮಲ್ಲಪುರಂ ನಡುವೆ ಭೂಸ್ಪರ್ಶಿಸಲಿದೆ. ಚಂಡಮಾರುತದ ಪ್ರಭಾವದಿಂದಾಗಿ ತಮಿಳುನಾಡು, ಪುದುಚೇರಿ, ಕರೈಕಲ್‌ನಲ್ಲಿ ನ.24ರಿಂದ 26ರವರೆಗೆ ಗುಡುಗು, ಸಿಡಿಲು ಸಹಿತ ಭಾರಿ ಮಳೆ, ಬಿರುಸಾದ ಗಾಳಿ ಇರಲಿದೆ’ ಎಂದು ಐಎಂಡಿ ಎಚ್ಚರಿಸಿದೆ.  

ಮುಂಜಾಗ್ರತಾ ಕ್ರಮವಾಗಿ ನ.26ರವರೆಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸರ್ಕಾರವು ಎಚ್ಚರಿಕೆ ನೀಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಆರು ತಂಡಗಳನ್ನು ಕುಡ್ಡಲೂರ್‌ ಜಿಲ್ಲೆಗೆ ಕಳುಹಿಸಲಾಗಿದೆ. ಪರಿಹಾರ ಕೇಂದ್ರಗಳನ್ನೂ ತೆರೆಯಲಾಗಿದೆ.

Leave a Reply

Your email address will not be published. Required fields are marked *

error: Content is protected !!