ಇಂಗ್ಲೀಷ್ ಭಾಷಾ ಕಲಿಕೆ ಇಂದು ಅನಿವಾರ್ಯ: ಶಾಸಕ ಲಾಲಾಜಿ ಮೆಂಡನ್
ಹಿರಿಯಡ್ಕ: ಅಂತಾರಾಷ್ಟ್ರೀಯ ಸಂಪರ್ಕ ಭಾಷೆಯಾಗಿ ಇಂಗ್ಲೀಷ್ ಭಾಷಾ ಕಲಿಕೆ ಇಂದು ಅನಿವಾರ್ಯವಾಗಿದ್ದು, ಇದನ್ನು ನಗಣ್ಯ ಮಾಡುವುದಿಲ್ಲ ಎಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದ್ದಾರೆ.
ಅವರು ಹಿರಿಯಡ್ಕದ ಕಾಜಾರಗುತ್ತುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದರು. ಜಗದ ಪರಿವರ್ತನೆಯೊಂದಿಗೆ ಆಂಗ್ಲ ಮಾಧ್ಯಮಕ್ಕೂ ಒತ್ತು ನೀಡಲಾಗುತ್ತಿದ್ದು, ಇಂಗ್ಲೀಷ್ ಮಾಧ್ಯಮ ಶಿಕ್ಷಣ ಇಂದು ಅನಿವಾರ್ಯವಾಗಿದೆ, ಇಂಗ್ಲೀಷ್ ಕಲಿಕೆ ವ್ಯಾಮೋಹವಲ್ಲ ಹಾಗಾಗಿ ಕಾಜಾರಗುತ್ತು ಶಾಲೆಯಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ಪೂರ್ಣ ಪ್ರಮಾಣದ ಸಹಕಾರ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಈ ವೇಳೆ ಉಡುಪಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ ಕೆ. ಮಾತನಾಡಿ, ಇತ್ತೀಚೆಗಿನ ದಿನಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಬೇಡಿಕೆ ಇದೆ ಎಂಬುದನ್ನು ಅರ್ಥ ಮಾಡಿಕೊಂಡು ಸರ್ಕಾರದಿಂದಲೂ ಅನುಮತಿಯನ್ನು ನೀಡಲು ಪ್ರಾರಂಭಿಸಿದ್ದಾರೆ. ಕಳೆದ ವರ್ಷದಲ್ಲಿ ಉಡುಪಿ ವಲಯದಲ್ಲಿ ರಾಜೀವ ನಗರ, ಒಳಕಾಡು, ಹಿರಿಯಡಕ ಹಾಗೂ ಪಡುಬಿದ್ರೆ
ಶಾಲೆಗಳಿಗೆ ಆಂಗ್ಲ ಮಾಧ್ಯಮದ ಬೋಧನೆಗೆ ಅವಕಾಶ ನೀಡಲಾಗಿದೆ.
ಪ್ರತೀ ವರ್ಷವೂ ಈ ರೀತಿಯ ಅನುಮೋದನೆಗೆ ಅವಕಾಶ ಸಿಕ್ಕಿದಲ್ಲಿ ಕಾಜಾರಗುತ್ತು ಶಾಲೆಯನ್ನು ಮೊದಲು ಪರಿಗಣಿಸಲಾಗುವುದು. ಶಾಲೆಯ ಹಳೆ ವಿದ್ಯಾರ್ಥಿಗಳು, ಊರಿನ ಹಿರಿಯರು, ದಾನಿಗಳು ಕೈ ಜೋಡಿಸಿ ಇದೊಂದು ಉತ್ತಮ ಕಾರ್ಯವನ್ನು ಮಾಡುತ್ತಿದ್ದು, ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಇದೇ ವೇಳೆ, ಮುಂದಿನ ದಿನಗಳಲ್ಲಿ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆಯನ್ನೂ ನೀಡಿದರು.
ಈ ಸಂದರ್ಭದಲ್ಲಿ ಉದ್ಯಮಿ ಕುಯಿಲಾಡಿ ಸುರೇಶ್ ನಾಯಕ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಕುದಿ ವಸಂತ್ ಶೆಟ್ಟಿ, ಶಾಲಾ ನಿವೃತ್ತ ಮುಖ್ಯೋಪಾಧ್ಯಾರಾಗಿದ್ದಂತಹ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಲ್ಪೆ ರಾಘವೇಂದ್ರ, ಪಿ. ಮುರುಳೀಧರ್ ಸರ್ ಹಾಗೂ ಗೌರಿ ಕೆ, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ
ಸಂಧ್ಯಾ ಕಾಮತ್, ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮೀನಾರಾಯಣ ಪ್ರಭು , ಶಾಲಾ ಮುಖ್ಯೋಪಾಧ್ಯಾಯ ಸಾಧು, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರುಗಳಾದ ದೇವೇಂದ್ರ ಪ್ರಭು, ಅನಿಲ್ ಶೆಟ್ಟಿ ಮಾಂಬೆಟ್ಟು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.