ಕಸ್ತೂರಿರಂಗನ್ ವರದಿ ಜಾರಿಗೆ ದಿನಗಣನೆ: ಆತಂಕದಲ್ಲಿ ಜನತೆ-ಶಾಸಕ ಸಂಸದರ ಮೌನ
ಬಿಜೆಪಿಯ ಕಸ್ತೂರಿರಂಗನ್ ವಿರೋಧಿ ಹೋರಾಟಗಾರರು ಎಲ್ಲಿ ಹೋದರು – ಜನತೆಗೆ ಉತ್ತರ ಕೊಡಿಸಿ : ಮುದ್ರಾಡಿ ಮಂಜುನಾಥ ಪೂಜಾರಿ
ಹೆಬ್ರಿ : ಕೊರೊನಾ ಮಹಾಮಾರಿಯ ನಡುವೆಯೂ ಕಳೆದ ಜುಲೈನಲ್ಲಿ ಕೇಂದ್ರ ಸರ್ಕಾರ ಕುದುರೆಮುಖ ಅಭಯಾರಣ್ಯ ಸೇರಿ ದೇಶದಲ್ಲಿ ಹುಲಿ ಯೋಜನೆ ಜಾರಿ ಮಾಡಿದೆ. ಇದೀಗ ಕಸ್ತೂರಿರಂಗನ್ ವರದಿಯನ್ನು ಜಾರಿ ಮಾಡಲು ಇದೇ ಡಿಸೆಂಬರ್ ೩೧ರಂದು ಅಂತಿಮ ಗಡು ವಿಧಿಸಿದೆ, ಜನತೆ ತೀವೃ ಆತಂಕದಲ್ಲಿದ್ದಾರೆ, ಬಿಜೆಪಿಯ ಅಂದಿನ ಕಸ್ತೂರಿರಂಗನ್ ಹೋರಾಟಗಾರರೂ ತುಟಿ ಬಿಚ್ಚುತ್ತಿಲ್ಲ. ಶಾಸಕ ಮತ್ತು ಸಂಸದರೂ ಮೌನವಹಿಸಿದ್ದಾರೆ. ಹೋರಾಟಗಾರರು ಸರ್ಕಾರ ಮತ್ತು ಜನಪ್ರತಿನಿಧಿಗಳಿಂದ ಜನತೆಗೆ ಉತ್ತರ ಕೊಡಿಸಲಿ, ಜನರ ಬದುಕಿನಲ್ಲಿ ಚೆಲ್ಲಾಟ ಆಡಬೇಡಿ. ಸಂಸದ ಶಾಸಕರು ಮೌನ ಮುರಿಯಲಿ, ಯಾವೂದೇ ಕಾರಣಕ್ಕೂ ಜಾರಿಗೆ ಬಿಡುವುದಿಲ್ಲ ಎಂದ ಹೋರಾಟಗಾರರು, ಶಾಸಕ ಸುನೀಲ್ ಕುಮಾರ್ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಈಗ ಎಲ್ಲಿದ್ದಾರೆ. ಹೋರಾಟಗಾರರು ಜನತೆಗೆ ಸರಿಯಾದ ಮಾಹಿತಿ ಕೊಡಿಸಿ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆಗ್ರಹಿಸಿದ್ದಾರೆ.
ಅವರು ಹೆಬ್ರಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಶಾಸಕರು ಮತ್ತು ಸಂಸದರು ಉಡುಪಿ ಜಿಲ್ಲೆಯಲ್ಲಿ ಕಸ್ತೂರಿರಂಗನ್ ವರದಿ ಜಾರಿಗೆ ಬಿಡುವುದಿಲ್ಲ ಎಂದು ಹೇಳಿದ್ದರು. ಈಗ ಜಾರಿಯಾಗುವಾಗ ಸುಮ್ಮನಿದ್ದಾರೆ. ಹೆಬ್ರಿ ತಾಲ್ಲೂಕು ಸಂಪೂರ್ಣ ವರದಿಯ ವ್ಯಾಪ್ತಿಗೆ ಸೇರಿದರೆ. ಜಿಲ್ಲೆ ೩೪ ಗ್ರಾಮಗಳು ಒಳಪಡುತ್ತವೆ. ನರೇಂದ್ರ ಮೋದಿಗೆ ಹೆದರಿ ಮುಖ್ಯಮಂತ್ರಿ, ಸಚಿವರು, ಸರ್ಕಾರ ವರದಿ ಅನುಷ್ಠಾನವಾಗುತ್ತಿದ್ದರೂ ಮಾತನಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ತನಕ ಜನವಿರೋಧಿ ಕಾನೂನು ಜಾರಿ ಮಾಡಿಲ್ಲ ಎಂದು ಮಂಜುನಾಥ ಪೂಜಾರಿ ಹೇಳಿದರು.
ಕೇಂದ್ರ ಸರ್ಕಾರದಲ್ಲಿ ಅರಣ್ಯ ಸಚಿವ ಕಸ್ತೂರಿರಂಗನ್ ವರದಿ ಮಂಡಿಸುವಾಗಲೂ ಸಂಸದೆ ಶೋಭಾ ಕರಂದ್ಲಾಜೆ ಮೌನವಾಗಿದ್ದರು. ಕೇರಳ ಸರ್ಕಾರ ರಾಜ್ಯದಲ್ಲಿ ಕೇವಲ ೧೦೦ ಗ್ರಾಮಗಳನ್ನು ವರದಿ ವ್ಯಾಪ್ತಿಗೆ ಸೇರಿಸಿದರೆ ರಾಜ್ಯದಲ್ಲಿ ೧೫೦೦ ಗ್ರಾಮಗಳು ವ್ಯಾಪ್ತಿಗೆ ಸೇರಲಿದೆ. ಕೇರಳ ಮಾದರಿಯನ್ನು ಕರ್ನಾಟಕ ಅನುಷ್ಠಾನ ಮಾಡಿದರೇ ರಾಜ್ಯಕ್ಕೆ ಹೆಚ್ಚಿನ ಸಮಸ್ಯೆ ಇಲ್ಲ. ಇಲ್ಲವಾದರೆ ಜನತೆಗೆ ಭಾರಿ ತೊಂದರೆಯಾಗಲಿದೆ ಎಂದು ಮಂಜುನಾಥ ಪೂಜಾರಿ ಹೇಳಿದರು. ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ನೂರಾರು ವರ್ಷಗಳಿಂದ ವಾಸಿಸುತ್ತಿರುವ ಸಾವಿರಾರು ಕುಟುಂಬಗಳಿಗೆ ಭಾರಿ ಸಮಸ್ಯೆಯಾಗಲಿದೆ. ಭೂಸುಧಾರಣ ಕಾಯ್ದೆಯಲ್ಲಿ ದೊರೆತ ಭೂಮಿ, ಅಕ್ರಮಸಕ್ರ, ೯೪ಸಿ ಭೂಮಿ ಮತ್ತು ಪಟ್ಟಾ ಭೂಮಿಯ ಮಾರಾಟದ ಹಕ್ಕನ್ನು ಜನತೆ ಕಳೆದುಕೊಳ್ಳಲಿದ್ದಾರೆ. ಮನೆ ನಿರ್ಮಾಣ, ದುರಸ್ತಿ, ರಸ್ತೆ, ವಿದ್ಯುತ್, ನೀರು ಹೀಗೆ ಯಾವೂದೇ ಅಭಿವೃದ್ಧಿ ಕೆಲಸಗಳು ನಡೆಸಲು ಕಾಯ್ದೆಯು ಅಡ್ಡಿಯಾಗುತ್ತಿದೆ. ಆದರೂ ಜನಪ್ರತಿನಿಧಿಗಳು ಸುಮ್ಮನಿದ್ದಾರೆ. ಬಿಜೆಪಿ ಸರ್ಕಾರವೂ ಎಲ್ಲಾ ರೀತಿಯಲ್ಲೂ ಜನತೆಗೆ ಅನ್ಯಾಯ ಮಾಡುತ್ತಿದೆ. ಗ್ರಾಮ ಪಂಚಾಯಿತಿಯಿಂದ ಕೇಂದ್ರದ ತನಕ ಬಿಜೆಪಿಯ ಆಡಳಿತವೇ ಇದ್ದು ಸರ್ವಾಧಿಕಾರಿಗಳಂತೆ ಆಡಳಿತ ಮಾಡುತ್ತಿದ್ದಾರೆ ಎಂದು ಮಂಜುನಾಥ ಪೂಜಾರಿ ಆರೋಪಿಸಿದರು.
ಹೋರಾಟಕ್ಕೆ ಸಿದ್ಧತೆ : ಜನತೆಗೆ ಸಮಸ್ಯೆಯಾಗುವ ಯಾವೂದೇ ಯೋಜನೆಯನ್ನು ಸರ್ಕಾರ ಜಾರಿ ಮಾಡಿದರೇ ನಾವು ಸಹಿಸುವುದಿಲ್ಲ. ಸರ್ಕಾರದ ಸ್ಪಷ್ಟ ನಿಲುವು ತಿಳಿಸದಿದ್ದರೆ ಅತೀ ಶೀಘ್ರವಾಗಿ ಬೃಹತ್ ಹೋರಾಟ ನಡೆಸಲಾಗುವುದು.ಕಣ್ಣೋರೆಸುವ ತಂತ್ರ ಬೇಡ ಎಂದು ಮಂಜುನಾಥ ಪೂಜಾರಿ ತಿಳಿಸಿದರು.
ಬಿಜೆಪಿಯವರಿಗೆ ಬಡವರ ಕಷ್ಟ ಗೊತ್ತಿಲ್ಲ : ನೀರೆ ಕೃಷ್ಣ ಶೆಟ್ಟಿ -ದೇಶ ಮತ್ತು ರಾಜ್ಯದ ಸರ್ಕಾರ ನಿರಂತರವಾಗಿ ಜನವಿರೋಧಿ ನೀತಿಯನ್ನೇ ಜಾರಿಗೆ ತರುತ್ತಿದೆ. ಜನರ ಕಷ್ಟ ಅವರಿಗೆ ಗೊತ್ತಿಲ್ಲ. ಬಡವರ ಕಣ್ಣೀರು ಗೊತ್ತಿಲ್ಲ. ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲಾಗದೇ ಅತೀ ಹೆಚ್ಚು ಕೊರೊನಾ ಪ್ರಕರಣವಿರುವ ರಾಜ್ಯ ಎಂಬ ಹೆಸರೇ ಬಿಜೆಪಿಯ ದೊಡ್ಡ ಸಾಧನೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ದೂರಿದರು.
ಸುದ್ಧಿಗೋಷ್ಠಿಯಲ್ಲಿ ಹೆಬ್ರಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ದನ್, ಸಂತೋಷ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ಎಚ್. ಶೀನ ಪೂಜಾರಿ, ಕೆ.ಚಂದ್ರಶೇಖರ ಬಾಯರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ ಆಚಾರ್, ಪ್ರಮುಖರಾದ ಮುನಿಯಾಲು ರವಿ ಪೂಜಾರಿ, ಶಶಿಕಲಾ ಆರ್.ಪಿ, ಮುದ್ರಾಡಿಯ ಶಶಿಕಲಾ ಡಿ.ಪೂಜಾರಿ, ಸೋಮೇಶ್ವರ ಶಿವರಾಮ ಪೂಜಾರಿ, ಹುತ್ತುರ್ಕೆ ದಿನೇಶ ಶೆಟ್ಟಿ, ಮುದ್ರಾಡಿ ಅಶ್ವಿನಿ ಗೌಡ, ಐಟಿಸೆಲ್ ಅಧ್ಯಕ್ಷ ಸಂತೋಷ ನಾಯಕ್ ಕನ್ಯಾನ, ಮುದ್ರಾಡಿ ಪ್ರದೀಪ ಆಚಾರ್ಯ ಹಾಜರಿದ್ದರು.