ಉಡುಪಿ: ನಗರದ ಅಂಗಡಿಗಳಲ್ಲಿ ಸರಣಿ ಕಳವು, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾದ ಕಳ್ಳ!
ಉಡುಪಿ:(ಉಡುಪಿ ಟೈಮ್ಸ್ ವರದಿ) ನಗರದ ನಾಲ್ಕು ಅಂಗಡಿಗಳಲ್ಲಿ ಸರಣಿ ಕಳವುಗೈದ ಕಳ್ಳನೊರ್ವ ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಘಟನೆ ಶನಿವಾರ ಮುಂಜಾವ ಐಡಿಯಲ್ ಜಂಕ್ಷನ್ ಬಳಿ ನಡೆದಿದೆ.
ಉಡುಪಿ ಶ್ರೀಕೃಷ್ಣ ಮಠದ ಹಿಂಭಾಗದ ವಾದಿರಾಜಾ ರಸ್ತೆಯಲ್ಲಿರುವ ನಗರ ಸಭಾ ಕಟ್ಟದಲ್ಲಿದ್ದ ಜಿನಸಿ ಅಂಗಡಿಯ ಬೀಗ ಮುರಿದ ಕಳ್ಳನೊರ್ವ ಅಂಗಡಿಯಲ್ಲಿದ್ದ ನಗದು ದೊಚಿದ್ದ, ನಂತರ ತೆಂಕಪೇಟೆಯ ಲಕ್ಷೀ ವೆಂಕಟೇಶ್ವರ ದೇವಸ್ಥಾನದ ಬಳಿ ಇರುವ ಜೋಗಪ್ಪ ಶೆಣೈ ಆಯುರ್ವೇದದ ಅಂಗಡಿ ಬೀಗ ಮುರಿದ ಕಳ್ಳ ಅಲ್ಲೂ ಜಾಲಾಡಿದ್ದ ಎನ್ನಲಾಗಿದೆ.
ಇಷ್ಟು ಮಾತ್ರವಲ್ಲದೆ, ವುಡ್ ಲ್ಯಾಂಡ್ಸ್ ಹೋಟೆಲ್ ಬಳಿಯ ಹೋಲ್ಸೇಲ್ ಅಂಗಡಿಯ ಬೀಗ ಮುರಿದಿದ್ದು ಅಲ್ಲೂ ಕಳ್ಳತನಕ್ಕೆ ಯತ್ನಸಿದ್ದ.
ರಾತ್ರಿ ಗಸ್ತುವಿನಲ್ಲಿದ್ದ ಪೊಲೀಸ್ ಜೀಪು ಕಂಡ ಕಳ್ಳನು ಓಡಲು ಯತ್ನಸಿದ್ದು, ಪೊಲೀಸರು ಆತನನ್ನು ಹಿಡಿದು ಜೀಪಿನಲ್ಲಿ ಕುಳ್ಳುರಿಸಿದ್ದು, ಇನ್ನೇನು ಜೀಪು ಸ್ಟಾರ್ಟ್ ಮಾಡುವಷ್ಟರಲ್ಲಿ ಕಳ್ಳ ಜೀಪಿನಿಂದ ಹಾರಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.
ಕಳ್ಳನು ಅಂಗಡಿಯ ಬೀಗ ಮುರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಕಳ್ಳನ ಬಂಧನಕ್ಕೆ ಮತ್ತೆ ಬಲೆ ಬೀಸಿದ್ದಾರೆ.