ಯಾವ ಪಕ್ಷದವರು ಗೋಮಾಂಸ ಹೆಚ್ಚು ರಫ್ತು ಮಾಡುತ್ತಿದ್ದಾರೆ?: ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮೊದಲು ಉತ್ತರ ಪ್ರದೇಶದಲ್ಲಿ ಯಾವ ಪಕ್ಷದವರು ಗೋ ಮಾಂಸ ಹೆಚ್ಚು ರಫ್ತು ಮಾಡುತ್ತಿದ್ದಾರೆ ಎನ್ನುವುದನ್ನು ಹೇಳಲಿ. ಆಮೇಲೆ ಗೋ ಹತ್ಯೆ ನಿಷೇಧ ಮಾಡಲಿ. ಸದ್ಯಕ್ಕೆ ಬುರುಡೆ ಬಿಡುವುದು ಬೇಡ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಶೀಘ್ರದಲ್ಲೇ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಲಿದೆ. ಮುಂದಿನ ಅಧಿವೇಶನದಲ್ಲಿ ಗೋವುಗಳ ಕಳ್ಳತನ, ಹತ್ಯೆ ನಿಷೇಧ ಕಾಯ್ದೆಗಳು ಜಾರಿಗೊಳ್ಳುತ್ತಿದ್ದು, ಈ ಸಂಬಂಧ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಜೊತೆಗೂ ಮಾತುಕತೆ ನಡೆಸಲಾಗಿದೆ ಎಂದು ಸಿ.ಟಿ ರವಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರಭು ಚೌಹಾಣ್ ಗೋಹತ್ಯೆ ನಿಷೇಧ ಸದ್ಯಕ್ಕೆ ಇಲ್ಲ ಎಂದಿದ್ದರೆ, ಸಿ.ಟಿ.ರವಿ ಬುರುಡೆ ಬಿಡುತ್ತಿದ್ದಾರೆ. ಮೊದಲು ಯಾವ ಪಕ್ಷ ಹೆಚ್ಚು ಗೋ ಮಾಂಸ ರಫ್ತು ಮಾಡುತ್ತಿದೆ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಸಾಕಷ್ಟು ಉಪಚುನಾವಣೆಗಳನ್ನು ಗೆಲ್ಲಲಾಗಿತ್ತು. ಉಪಚುನಾವಣೆಯಲ್ಲಿನ ಬಿಜೆಪಿ ಗೆಲುವು ಸಾರ್ವತ್ರಿಕ ಚುನಾವಣೆಗೆ ಅನ್ವಯವಾಗುವುದಿಲ್ಲ. ಉಪಚುನಾವಣೆ ಹಣ, ಸರ್ಕಾರದ ಅಧಿಕಾರದ ಮೇಲೆ ನಡೆದಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.
ಇದೇ ನ.23 ರಂದು ಬಸನಗೌಡ ತುರುವಿಹಾಳ ಅವರು ಮಸ್ಕಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ತುರುವಿಹಾಳ್ ಸೇರ್ಪಡೆ ಬಗ್ಗೆ ಸ್ಥಳೀಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಬಸವಕಲ್ಯಾಣ ಉಪಚುನಾವಣೆಗೆ ಸಾಕಷ್ಟು ಆಕಾಂಕ್ಷಿಗಳಿದ್ದು, ಅಭ್ಯರ್ಥಿಯ ಕೊರತೆಯೇನಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು