ಕೃಷ್ಣ ಮಠದಲ್ಲಿ ನ.27 ರಿಂದ ಲಕ್ಷ ದೀಪೋತ್ಸವ: 200 ಜನರಿಗಿಂತ ಹೆಚ್ಚು ಸೇರುವಂತಿಲ್ಲ
ಉಡುಪಿ: ಕೃಷ್ಣನಗರಿ ಉಡಪಿಯ ಶ್ರೀ ಕೃಷ್ಣ ಮಠದಲ್ಲಿ ನ. 27 ರಿಂದ ಲಕ್ಷದೀಪೋತ್ಸವ ನಡೆಯಲಿದ. ಕೋವಿಡ್ ಹಿನ್ನೆಲೆ ಈ ಬಾರಿಯ ಲಕ್ಷ ದೀಪೋತ್ಸವವನ್ನು ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲ ಪಿಂಡಿಯ0ತೆ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಬಗ್ಗೆ ಮಾಹಿತಿ ನೀಡಿರುವ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಭಕ್ತರು ಪಾಲ್ಗೊಳ್ಳಬೇಕು ಎಂಬುದು ನಮ್ಮ ಅಪೇಕ್ಷ, ಆದರೆ ಸರಕಾರದ ಕಾನೂನಿಗೆ ಅನುಗುಣವಾಗಿ ಅನಿವಾರ್ಯವಾಗಿ ಸರಳ ಲಕ್ಷದೀಪೋತ್ಸವ ಆಚರಣೆಯ ಈ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ, ಭಕ್ತರಿಗೆ ಅನುಕೂಲವಾಗುವಂತೆ ದರ್ಶನದ ವ್ಯವಸ್ಥೆಯ ಸಮಯವನ್ನು ವಿಸ್ತರಿಸಿದ್ದೇವೆ. ಉತ್ಸವದಲ್ಲಿ ಪಾಲ್ಗೊಳ್ಳಲು ಆಗದಿದ್ದರೂ ಭಕ್ತರು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡಬಹುದಾಗಿದ್ದು, ಉತ್ಸವವನ್ನು ಆನ್ಲೈನ್ ಮೂಲಕ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.
ಇನ್ನು ಲಕ್ಷದೀಪೋತ್ಸವದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ಕಾನೂನು ಪ್ರಕಾರವಾಗಿ 200 ಜನರಿಗಿಂತ ಹೆಚ್ಚಿನ ಜನರು ಸೇರುವಂತಿಲ್ಲ, ವಿಟ್ಲಪಿಂಡಿ ನಡೆಸಿದಂತೆ ಸೀಮಿತ ಜನರ ಪಾಲ್ಗೊಳ್ಳುವಿಕೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲು ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೀ ಕೃಷ್ಣ ಮಠದಲ್ಲಿ ಉತ್ಥಾನ ದ್ವಾದಶೀಯ ನ.27 ರಿಂದ ನಾಲ್ಕು ದಿನಗಳ ಕಾಲ ಲಕ್ಷದೀಪೋತ್ಸವ ನಡೆಯಲಿದೆ. ಇದೇ ವೇಳೆ ವಾರ್ಷಿಕ ಉತ್ಸವಗಳೂ ಆರಂಭಗೊಳ್ಳಲಿದ್ದು, ಅಂದು ಚಾತುರ್ಮಾಸ್ಯ ಅವಧಿಯಲ್ಲಿ ಗರ್ಭ ಗುಡಿಯಲ್ಲಿರುವ ಉತ್ಸವ ಮೂರ್ತಿಯನ್ನು ಉತ್ಸವದಲ್ಲಿ ತಂದು ಪೂಜಿಸಲಾಗುತ್ತದೆ. ಸಂಜೆ ಬಳಿಕ ಉತ್ಸವ ನಡೆಯುವಾಗ ರಥಬೀದಿಯಲ್ಲಿ ಹಾಕಿದ ಅಟ್ಟಳಿಗೆಯಲ್ಲಿ ಲಕ್ಷ ಹಣತೆಗಳಲ್ಲಿ ದೀಪವನ್ನು ಬೆಳಗಿಸಲಾಗುತ್ತದೆ.