ಡ್ರಗ್ಸ್ ಜಾಲದ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಹೆಡ್ ಕಾನ್‌ಸ್ಟೆಬಲ್ ಬಂಧನ
ಬೆಂಗಳೂರು: ರಾಜಕಾರಣಿ, ವೈದ್ಯ, ಉದ್ಯಮಿ ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳ ಮಕ್ಕಳು ಸೇರಿಕೊಂಡು ನಡೆಸುತ್ತಿದ್ದ ಡ್ರಗ್ಸ್ ಜಾಲದ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಆರೋಪದಡಿ ಸದಾಶಿವ ನಗರ ಠಾಣೆ ಹೆಡ್ ಕಾನ್‌ಸ್ಟೆಬಲ್ ಪ್ರಭಾಕರ್ ಅವರನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ‘ಬಂಧಿತ ಪ್ರಭಾಕರ್, ಪೊಲೀಸರ ತನಿಖೆ ಬಗ್ಗೆ ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದರು. ಅದೇ ಕಾರಣಕ್ಕೆ ಅವರನ್ನು ಇತ್ತೀಚೆಗೆ ಅಮಾನತು ಮಾಡಲಾಗಿತ್ತು. ಇದೀಗ ಅವರನ್ನು ಪ್ರಕರಣದಡಿ ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯಲಾಗುವುದು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು. ‘ಡಾರ್ಕ್‌ನೆಟ್ ಮೂಲಕ ಡ್ರಗ್ಸ್ ಖರೀದಿಸಿ ಅಂಚೆ ಮೂಲಕ ನಗರಕ್ಕೆ ತರಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ಇತ್ತೀಚೆಗಷ್ಟೇ ಎಂ.ಸುಜಯ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು. 500 ಗ್ರಾಂ ಹೈಡ್ರೊ ಗಾಂಜಾ ಜಪ್ತಿ ಮಾಡಿದ್ದರು. ಈ ಡ್ರಗ್ಸ್ ಜಾಲದಲ್ಲಿದ್ದ ಹೇಮಂತ್ ಮುದ್ದಪ್ಪ, ಪ್ರಸಿದ್ ಶೆಟ್ಟಿ, ಸುನೀಷ್ ಹಾಗೂ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅವರನ್ನೂ ಬಂಧಿಸಲಾಗಿತ್ತು’ ಎಂದೂ ತಿಳಿಸಿದರು. ಜಾಲದ ಆರೋಪಿಗಳ ಜೊತೆ ನಂಟು ಹೊಂದಿದ್ದ, ಕಾಂಗ್ರೆಸ್ ಮುಖಂಡ ಹಾವೇರಿಯ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಅವರನ್ನೂ ಬಂಧಿಸಲಾಗಿತ್ತು. ಈ ಎಲ್ಲ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದೂ ಹೇಳಿದರು. ತಂತ್ರಜ್ಞಾನದಲ್ಲಿ ಪರಿಣತ: ‘ದೆಹಲಿಯಲ್ಲಿ ವಿಶೇಷ ತರಬೇತಿ ಪಡೆದಿದ್ದ ಹೆಡ್ ಕಾನ್‌ಸ್ಟೆಬಲ್, ತಂತ್ರಜ್ಞಾನದಲ್ಲಿ ಪರಿಣತ. ಹಲವು ಪ್ರಕರಣಗಳ ತನಿಖೆಯಲ್ಲಿ ತಾಂತ್ರಿಕ ನೆರವು ನೀಡಿದ್ದರು. ಆರೋಪಿಗಳ ಮೊಬೈಲ್ ನೆಟ್‌ವರ್ಕ್, ಕರೆಗಳ ವಿವರ ಸಂಗ್ರಹ, ಹೀಗೆ ಹಲವು ತಾಂತ್ರಿಕ ಪುರಾವೆಗಳನ್ನು ಪ್ರಭಾಕರ್ ಪತ್ತೆ ಮಾಡುತ್ತಿದ್ದರು’ ಎಂದೂ ಸಿಸಿಬಿ ಅಧಿಕಾರಿ ತಿಳಿಸಿದರು. |