ಅಮಿತ್ ಶಾ ತಮಿಳುನಾಡು ಭೇಟಿಗೆ ವಿರೋಧ: ಟ್ರೆಂಡ್ ಆದ ‘ಗೋಬ್ಯಾಕ್ ಅಮಿತ್ ಶಾ’ ಹ್ಯಾಷ್ ಟ್ಯಾಗ್
ನವದೆಹಲಿ: ಅಮಿತ್ ಶಾ ಅವರ ತಮಿಳುನಾಡು ಭೇಟಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಭಾರೀ ಸದ್ದು ಮಾಡುತ್ತಿದ್ದು ‘ಗೋಬ್ಯಾಕ್ ಅಮಿತ್ ಶಾ’ ಹ್ಯಾಷ್ ಟ್ಯಾಗ್ ಭಾರೀ ಟ್ರೆಂಡ್ ಆಗಿ ಬಿಟ್ಟಿದೆ. ಈ ಗೋ ಬ್ಯಾಕ್ ಅಮಿತ್ ಶಾ ಒಂದು ದಿನದ ಹಿಂದಿನಿ0ದಲೇ ಟ್ರೆಂಡಿ0ಗ್ ನಲ್ಲಿದ್ದು, ಅಮಿತ್ ಶಾ ಭೇಟಿಯ ವಿರುದ್ದ ತರಹೇವಾರಿ ಮೀಮ್ಸ್, ಕಾಮೆಂಟುಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ. ಅಲ್ಲಲ್ಲಿ ಇದಕ್ಕೆ ಕೌಂಟರ್ ಕೊಡುವ ಪೋಸ್ಟ್ಗಳೂ ಇವೆ. ನಿಮ್ಮ ದ್ವೇಷ ರಾಜಕಾರಣವನ್ನು ತಮಿಳುನಾಡಿನಲ್ಲಿ ಪ್ರದರ್ಶಿಸಬೇಡಿ ಎನ್ನುವ ಕಾಮೆಂಟುಗಳೂ ಬರುತ್ತಿವೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಡಿಎಂಕೆಯ ಕರುಣಾನಿಧಿ ಮತ್ತು ಎಐಎಡಿಎಂಕೆಯ ಜಯಲಲಿತಾ ಅವರಿಲ್ಲದ ಅಸೆಂಬ್ಲಿ, ಚುನಾವಣೆ ಎದುರಾಗುತ್ತಿರುವುದರಿಂದ, ಬಿಜೆಪಿ ಇಲ್ಲಿ ತನ್ನ ನೆಲೆಯನ್ನು ಕಾಣಲು ಪ್ರಯತ್ನಿಸುತ್ತಿದೆ ಎಂದೂ ಹೇಳಲಾಗುತ್ತಿದೆ. ಮುಂದಿನ ವರ್ಷ ತಮಿಳುನಾಡಿನ ಅಸೆಂಬ್ಲಿ ಚುನಾವಣೆ ಎದುರಾಗುತ್ತಿರುವುದರಿಂದ ಅಮಿತ್ ಶಾ ಅವರ ಭೇಟಿ ಮಹತ್ವವನ್ನು ಪಡಿದಿದ್ದು, ಅಮಿತ್ ಶಾ ಈ ಭೇಟಿಯ ವೇಳೆ, ಹಲವು ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ಮುಖಂಡರ ಜೊತೆಯೂ ಮೀಟಿಂಗ್ ನಡೆಯಲಿದೆ. ಜೊತೆಗೆ, ತಲೈವಾ ರಜನೀಕಾಂತ್ ಅವರನ್ನು ಮತ್ತು ಸದ್ಯ ಡಿಎಂಕೆಯಲ್ಲಿರುವ, ಹೊಸ ಪಕ್ಷ ಕಟ್ಟುವ ತಯಾರಿಯಲ್ಲಿರುವ ಮಾಜಿ ಸಿಎಂ ಕರುಣಾನಿಧಿಯವರ ಪುತ್ರ ಎಂ.ಕೆ.ಅಳಗಿರಿಯನ್ನೂ ಅಮಿತ್ ಶಾ ಭೇಟಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. |