ಲವ್ ಜಿಹಾದ್’ ಬಿಜೆಪಿ ಸೃಷ್ಟಿ: ಮುಖ್ಯಮಂತ್ರಿ ಗೆಹ್ಲೋಟ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ
ಜೈಪುರ್: ಲವ್ ಜಿಹಾದ್ ಸುತ್ತ ರಾಜಸ್ಥಾನ ರಾಜಕೀಯ ಸುತ್ತುತ್ತಿದೆ. ‘ಲವ್ ಜಿಹಾದ್’ ಎಂಬ ಪದವನ್ನು ಬಿಜೆಪಿ ಸೃಷ್ಟಿಸಿ ಮುನ್ನಲೆಗೆ ತಂದಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ದೇಶವನ್ನು ವಿಭಜಿಸಲು, ಧಾರ್ಮಿಕ ಸಾಮರಸ್ಯ ಹಾಳುಮಾಡಲು ಬಿಜೆಪಿ ಇಂತಹ ಪದ ಪ್ರಯೋಗಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದುವೆ ಎಂಬುದು ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದ್ದು, ಅದನ್ನು ತಡೆಯಲು ಕಾಯ್ದೆ ತರುವುದು ಸಂಪೂರ್ಣ ಅಸಂವಿಧಾನಿಕ ಕ್ರಮ ಎಂದು ಅವರು ಹೇಳಿದ್ದಾರೆ. ಈ ಕಾಯ್ದೆ ಯಾವ ನ್ಯಾಯಾಲಯದಲ್ಲೂ ಊರ್ಜಿತವಾಗುವುದಿಲ್ಲ ಎಂದು ಹೇಳಿರುವ ಅವರು, ಪ್ರೇಮದಲ್ಲಿ ಜಿಹಾದ್ಗೆ ಸ್ಥಾನವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲವ್ ಜಿಹಾದ್ ಎಂಬುದು ಬಿಜೆಪಿ ಸೃಷ್ಟಿಸಿರುವ ಪದ ಎಂಬ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿಕೆಗೆ ಬಿಜೆಪಿ ಕೆಂಡಾ ಮಂಡಲವಾಗಿದೆ.
ಬಿಜೆಪಿ ನಾಯಕ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾತನಾಡಿ, ಸಾವಿರಾರು ಮಂದಿ ಯುವತಿಯರನ್ನು ಲವ್ ಜಿಹಾದ್ ಹೆಸರಿನಲ್ಲಿ ಮತಾಂತರಗೊಳಿಸಲಾಗುತ್ತಿದೆ. ಮದುವೆ ಎಂಬುದು ವೈಯಕ್ತಿಕ ವಿಷಯವಾಗಿದ್ದರೆ. ಧರ್ಮದ ಆಚರಣೆಗೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು ಎಂದು ಶೆಖಾವತ್ ಹೇಳಿದ್ದಾರೆ.