ಉತ್ತರ ಪ್ರದೇಶದ ರಸ್ತೆ ಅಪಘಾತ: 6 ಮಕ್ಕಳು ಸೇರಿ 14 ಮಂದಿ ಸ್ಥಳದಲ್ಲಿಯೇ ದಾರುಣ ಸಾವು
ಪ್ರತಾಪ್ ಗಢ: ರಸ್ತೆ ಅಪಘಾತ ಉತ್ತರ ಪ್ರದೇಶದಲ್ಲಿ ಮತ್ತೆ ಪುನರಾವರ್ತಿಸಿದೆ. ಕಳೆದ ರಾತ್ರಿ ಪ್ರಯಾಗ್ ರಾಜ್-ಲಕ್ನೊ ಹೆದ್ದಾರಿ ವ್ಯಾಪ್ತಿಯ ಮಣಿಕ್ ಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಪ್ರಯಾಣಿಸುತ್ತಿದ್ದ ಕಾರು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಕ್ಕಳು ಸೇರಿದಂತೆ 14 ಮಂದಿ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಎಸ್ ಯುವಿ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ಕಳೆದ ರಾತ್ರಿ 11.45ರ ಸುಮಾರಿಗೆ ಪ್ರಯಾಗ್ ರಾಜ್-ಲಕ್ನೊ ಹೆದ್ದಾರಿಯ ದೆಶ್ರಾಜ್ ಇನಾರಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು ಘಟನೆ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಕಳವಳ ವ್ಯಕ್ತಪಡಿಸಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಾಧ್ಯವಾದ ಎಲ್ಲಾ ನೆರವು ನೀಡುವಂತೆ ಆದೇಶ ನೀಡಿದ್ದಾರೆ.
ಟ್ರಕ್ ನ ಹಿಂಭಾಗದಿಂದ ನಜ್ಜುಗುಜ್ಜಾದ ಕಾರನ್ನು ಬೊಲೆರೊ ಬಳಸಿ ತೆಗೆಯಲಾಗಿದೆ. ದುರ್ಘಟನೆ ಬಗ್ಗೆ ಮಾಹಿತಿ ನೀಡಿದ ಪ್ರತಾಪ್ ಗಢ್ ಎಸ್ಪಿ ಅನುರಾಗ್ ಆರ್ಯ, ಟೈರ್ ಪಂಕ್ಚರ್ ಆಗಿದ್ದರಿಂದ ಹೆದ್ದಾರಿಯ ಪಕ್ಕ ಟ್ರಕ್ ನ್ನು ನಿಲ್ಲಿಸಲಾಗಿತ್ತು. ಆಗ ಹಿಂದಿನಿಂದ ಎಸ್ ಯುವಿ ವೇಗವಾಗಿ ಬಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆಯಿತು. ಗುದ್ದಿದ ರಭಸಕ್ಕೆ ಕಾರಿನ ಮುಂದಿನ ಭಾಗ ಟ್ರಕ್ ನ ಹಿಂಬದಿಗೆ ಸಿಕ್ಕಿಹಾಕಿಕೊಂಡು ಬೊಲೆರೊ ಸಹಾಯದಿಂದ ಹೊರತೆಗೆಯಬೇಕಾಯಿತು ಎಂದು ತಿಳಿಸಿದ್ದಾರೆ.
ಮೃತಪಟ್ಟವರೆಲ್ಲರೂ ಮದುವೆ ಸಮಾರಂಭ ಮುಗಿಸಿ ಜಿಲ್ಲೆಯ ಕುಂದಾ ಬಳಿ ಇರುವ ತಮ್ಮ ಗ್ರಾಮಕ್ಕೆ ವಾಪಸಾಗುತ್ತಿದ್ದರು.
ಮುಖ್ಯಮಂತ್ರಿ ಪರಿಹಾರ: ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಕಟಿಸಿದ್ದಾರೆ.